Singapore open: 77ನೇ ಶ್ರೇಯಾಂಕದ ಆಟಗಾರನೆದುರು ಸೋತ ಕಿಡಂಬಿ ಶ್ರೀಕಾಂತ್; ಎರಡನೇ ಸುತ್ತಿಗೆ ಪಿವಿ ಸಿಂಧು
Singapore open: ಸಿಂಗಾಪುರ ಓಪನ್‌ನ ಮೊದಲ ಸುತ್ತಿನಲ್ಲೇ ಕಿಡಂಬಿ ಶ್ರೀಕಾಂತ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಭಾರತದ ಆಟಗಾರ ಮಿಥುನ್ ಮಂಜುನಾಥ್ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರನ್ನು ಸೋಲಿಸಿದರು.
ಸಿಂಗಾಪುರ ಓಪನ್‌ನ (Singapore open) ಮೊದಲ ಸುತ್ತಿನಲ್ಲೇ ಕಿಡಂಬಿ ಶ್ರೀಕಾಂತ್ (Kidambi Srikanth) ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಭಾರತದ ಆಟಗಾರ ಮಿಥುನ್ ಮಂಜುನಾಥ್ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರನ್ನು ಸೋಲಿಸಿದರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಮೊದಲ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದರು. ಏಪ್ರಿಲ್‌ನಲ್ಲಿ ನಡೆದ ಆರ್ಲಿಯನ್ಸ್ ಮಾಸ್ಟರ್ಸ್ ಸೂಪರ್ 100 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಮಂಜುನಾಥ್ ಮೊದಲ ಸುತ್ತಿನ ಪಂದ್ಯದಲ್ಲಿ 21-17, 15-21, 21-18 ಸೆಟ್‌ಗಳಿಂದ ವಿಶ್ವದ 11ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರನ್ನು ಸೋಲಿಸಿದರು. ವಿಶ್ವ ರ ್ಯಾಂಕಿಂಗ್ನಲ್ಲಿ 77ನೇ ಸ್ಥಾನದಲ್ಲಿರುವ ಮಂಜುನಾಥ್ ಮುಂದಿನ ಸುತ್ತಿನಲ್ಲಿ ಐರ್ಲೆಂಡ್ನ ಅನ್ಹತ್ ನ್ಗುಯೆನ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 36ನೇ ಶ್ರೇಯಾಂಕಿತ ಆಟಗಾರ್ತಿ ಬೆಲ್ಜಿಯಂನ ಲಿಯಾನ್ ತಾನ್ ಅವರನ್ನು 21-15, 21-11 ಸೆಟ್‌ಗಳಿಂದ ಸೋಲಿಸಿ ಪಿವಿ ಸಿಂಧು ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಮುಂದಿನ ಸುತ್ತಿನಲ್ಲಿ ವಿಯೆಟ್ನಾಂನ ಥು ಲಿನ್ ಲಿನ್ ನ್ಗುಯೆನ್ ಅವರನ್ನು ಎದುರಿಸಲಿದ್ದಾರೆ. ಕಿಡಂಬಿ ಶ್ರೀಕಾಂತ್ ವಿರುದ್ಧದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 24 ವರ್ಷದ ಮಂಜುನಾಥ್ ವೇಗದ ಆರಂಭ ಪಡೆದು 6-2ರ ಮುನ್ನಡೆ ಪಡೆದರು. ಪಂದ್ಯದುದ್ದಕ್ಕೂ ಮುನ್ನಡೆ ಕಾಯ್ದುಕೊಂಡ ಅವರು ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು.
ಶ್ರೀಕಾಂತ್ ಎರಡನೇ ಗೇಮ್‌ನಲ್ಲಿ ಪುನರಾಗಮನ ಮಾಡಿ, ವಿರಾಮದವರೆಗೆ 11-8 ಮುನ್ನಡೆ ಸಾಧಿಸಿದರು. ನಂತರ ಮುನ್ನಡೆಯನ್ನು ಹೆಚ್ಚಿಸಿ 1-1 ರಲ್ಲಿ ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಉತ್ತಮ ಹಿಡಿತವನ್ನು ತೋರಿದ ಮಂಜುನಾಥ್ ವಿರಾಮದವರೆಗೂ 11-10ರಲ್ಲಿ ಅಲ್ಪ ಮುನ್ನಡೆ ಸಾಧಿಸಿದರು. ನಂತರ ಶ್ರೀಕಾಂತ್ 16-15 ಮುನ್ನಡೆ ಪಡೆದರು. ಆದರೆ ಮಂಜುನಾಥ್ 18-18 ಅಂಕಗಳಿಸುವ ಮೂಲಕ ಸತತ 3 ಅಂಕಗಳೊಂದಿಗೆ ಗೇಮ್ ಹಾಗೂ ಪಂದ್ಯವನ್ನು ಗೆದ್ದುಕೊಂಡರು.
ಮಂಜುನಾಥ್ ಈ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಜನವರಿಯಲ್ಲಿ ಇಂಡಿಯಾ ಓಪನ್ ಸೂಪರ್ 500 ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಈ ಹಿಂದೆ ಮಂಜುನಾಥ್, ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನ ಸೆಮಿ-ಫೈನಲ್ ಮತ್ತು ಒಡಿಶಾ ಸೂಪರ್ 100 ರ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿದ್ದರು. ಜೊತೆಗೆ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಭಾಗವಾಗಿದ್ದರು. ಇನ್ನು ಮಹಿಳೆಯರ ವಿಭಾಗದ ಬಗ್ಗೆ ಹೇಳುವುದಾದರೆ, ಮಹಿಳಾ ಸಿಂಗಲ್ಸ್ನಲ್ಲಿ ಪಿವಿ ಸಿಂಧು ನಿಧಾನಗತಿಯ ಆರಂಭ ಮಾಡಿ 1-4ರಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ 7-7ರಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
ಬಳಿಕ ಪಿವಿ ಸಿಂಧು ವಿರಾಮದವರೆಗೆ 11-8 ರಿಂದ ಮುನ್ನಡೆ ಸಾಧಿಸಿ, ನಂತರ ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದರು. ಎರಡನೇ ಗೇಮ್‌ನಲ್ಲಿ ಪಿವಿ ಸಿಂಧು ಉತ್ತಮ ಆರಂಭ ಪಡೆದು 5-1 ಮುನ್ನಡೆ ಸಾಧಿಸಿದರು. ನಂತರ ಸತತ 3 ಅಂಕ ಗಳಿಸಿ ಮುನ್ನಡೆಯನ್ನು ಹೆಚ್ಚಿಸಿಕೊಂಡರು. ಆದರೆ ಪಿವಿ ಸಿಂಧು ಆಟ ಹಾಗೂ ಪಂದ್ಯ ಗೆಲ್ಲುವಲ್ಲಿ ಹೆಚ್ಚು ತೊಂದರೆ ಅನುಭವಿಸಲಿಲ್ಲ.