ಸಿನಿಮಾ ಮತ್ತು ಕ್ರೀಡೆಗೆ ಹತ್ತಿರದ ನಂಟು. ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಿದ ಅನೇಕರ ಜೀವನದ ಕತೆಗಳು ಸಿನಿಮಾ ಆಗಿವೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಮಾಡಲು ಈಗ ಸಿದ್ಧತೆ ನಡೆಯುತ್ತಿದೆ. ಬಹಳ ದಿನಗಳಿಂದ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಆದೀಗ ಅಧಿಕೃತ ಆಗಿದೆ. ಸ್ವತಃ ಸೌರವ್ ಗಂಗೂಲಿ ಅವರೇ ತಮ್ಮ ಬಯೋಪಿಕ್ಗೆ ಅನುಮತಿ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಅವರ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುವ ಸಾಧ್ಯತೆ ದಟ್ಟವಾಗಿದೆ.
‘ಹೌದು, ನನ್ನ ಬಯೋಪಿಕ್ ಮಾಡಲು ನಾನು ಅನುಮತಿ ನೀಡಿದ್ದೇನೆ. ಈ ಸಿನಿಮಾ ಹಿಂದಿಯಲ್ಲಿ ಮೂಡಿಬರಲಿದೆ. ನಿರ್ದೇಶಕರು ಯಾರು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಎಲ್ಲವೂ ಅಂತಿಮವಾಗಲು ಇನ್ನೂ ಕೆಲವು ದಿನಗಳ ಸಮಯ ಬೇಕಾಗಲಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಈ ಬಯೋಪಿಕ್ನಲ್ಲಿ ಗಂಗೂಲಿ ಅವರ ಆರಂಭದ ಜೀವನದಿಂದ ಹಿಡಿದು ಅವರು ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಅನೇಕ ವಿವರಗಳು ಇರಲಿವೆ.
ಮೂಲಗಳ ಪ್ರಕಾರ ದೊಡ್ಡ ಪ್ರೊಡಕ್ಷನ್ ಕಂಪನಿಯೊಂದು ಸೌರವ್ ಗಂಗೂಲಿಯವರ ಬಯೋಪಿಕ್ ಮಾಡಲು ಮುಂದೆ ಬಂದಿದೆ. 200ರಿಂದ 250 ಕೋಟಿ ರೂ. ಬಜೆಟ್ನಲ್ಲಿ ಈ ಚಿತ್ರ ಮೂಡಿಬರಲಿದೆ. ಸ್ಕ್ರಿಪ್ಟ್ ಕೆಲಸಗಳು ಜಾರಿಯಲ್ಲಿದ್ದು, ಗಂಗೂಲಿ ಜೊತೆ ಅನೇಕ ಮೀಟಿಂಗ್ಗಳು ನಡೆದಿವೆ.
ಹಾಗಾದರೆ ಗಂಗೂಲಿ ಪಾತ್ರದಲ್ಲಿ ನಟಿಸುವ ಕಲಾವಿದರ ಯಾರು? ಸದ್ಯಕ್ಕೆ ಇದು ಹಾಟ್ ಟಾಪಿಕ್ ಆಗಿದೆ. ತಮ್ಮ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ನಟಿಸಿದರೆ ಸೂಕ್ತ ಎಂದು ಸ್ವತಃ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಇಬ್ಬರು ನಟರ ಹೆಸರುಗಳು ಹರಿದಾಡುತ್ತಿವೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಈ ಹಿಂದೆ ಎಂಎಸ್ ಧೋನಿ ಜೀವನಾಧಾರಿತ ‘ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮೊಹಮ್ಮದ್ ಅಜರುದ್ದೀನ್ ಜೀವನಾಧಾರಿತ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಿರಲಿಲ್ಲ. ಸಚಿನ್ ಜೀವನದ ಕುರಿತು ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಡಾಕ್ಯುಡ್ರಾಮಾ ಮೂಡಿಬಂದಿತ್ತು. 1983ರಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ ಚಿತ್ರ ತಯಾರಾಗಿದೆ. ಲಾಕ್ಡೌನ್ ಕಾರಣದಿಂದ ಅದರ ಬಿಡುಗಡೆ ವಿಳಂಬ ಆಗುತ್ತಿದೆ.
ಇದನ್ನೂ ಓದಿ:
ಗಂಡು ಎನ್ನುವ ಹಣೆಪಟ್ಟಿ, ಅತ್ಯಾಚಾರ ಆರೋಪ: ಅಥ್ಲೀಟ್ ಪಿಂಕಿ ಕುರಿತು ಬಯೋಪಿಕ್
32 ವರ್ಷದ ಕೆರಿಯರ್ನಲ್ಲಿ ಮೊಟ್ಟಮೊದಲ ಬಾರಿಗೆ ಬಯೋಪಿಕ್ಗೆ ಸಹಿ ಹಾಕಿದ ಸಲ್ಮಾನ್ ಖಾನ್