AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷಗಳ ಬಳಿಕ ಸೆಮಿಫೈನಲ್​ಗೇರಿದ ಸ್ಪೇನ್..!

FIFA World Cup 2026: ಫಿಫಾ ವಿಶ್ವಕಪ್ ಅಂಗಳದಲ್ಲಿ ಸ್ಪೇನ್ ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಈ ಪ್ರದರ್ಶನದೊಂದಿಗೆ ಇದೀಗ ಬೆಲ್ಜಿಯಂ ತಂಡಕ್ಕೆ ಸೋಲುಣಿಸಿರುವ 'ಲಾ ರೋಜಾ'  ಪಡೆ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2014, 2018, 2022 ರಲ್ಲಿ ಸಾಧ್ಯವಾಗದೇ ಇರುವುದನ್ನು ಸ್ಪೇನ್ ಯುವ ಪಡೆ ಸಾಧಿಸಿ ತೋರಿಸಿದ್ದಾರೆ.

16 ವರ್ಷಗಳ ಬಳಿಕ ಸೆಮಿಫೈನಲ್​ಗೇರಿದ ಸ್ಪೇನ್..!
SpainImage Credit source: FIFA
ಝಾಹಿರ್ ಯೂಸುಫ್
|

Updated on:Jul 11, 2026 | 8:27 AM

Share

ಸ್ಪೇನ್ ತಂಡದ ಬರೋಬ್ಬರಿ 16 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. ಲಾಸ್ ಏಂಜಲೀಸ್​ನ ಸೋಫಿ ಸ್ಟೇಡಿಯಂನಲ್ಲಿ ನಡೆದ ರೋಚಕ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-2 ಅಂತರದಿಂದ ಸೋಲಿಸಿ ಸ್ಪೇನ್ ಸೆಮಿಫೈನಲ್​ಗೆ ಪ್ರವೇಶಿಸಿದೆ. ಅದು ಸಹ ಹದಿನಾರು ವರ್ಷಗಳ ಬಳಿಕ ಎಂಬುದು ವಿಶೇಷ.

ಅಂದರೆ 2010 ರಲ್ಲಿ ಫಿಫಾ ವಿಶ್ವಕಪ್ ಗೆದ್ದ ಬಳಿಕ ಸ್ಪೇನ್ ತಂಡವು ಒಮ್ಮೆಯೂ ಸೆಮಿಫೈನಲ್​ಗೆ ಪ್ರವೇಶಿಸಿರಲಿಲ್ಲ. ಈ ಬಾರಿ ಯುವ ಆಟಗಾರರೊಂದಿಗೆ ಕಣಕ್ಕಿಳಿದ ಸ್ಪೇನ್ ಇದೀಗ ತನ್ನ ದೀರ್ಘಕಾಲದ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ.

 ‘ಸೂಪರ್ ಸಬ್’ ಮೆರಿನೊ!

ಈ ಪಂದ್ಯದ ಆರಂಭದಿಂದಲೂ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಸ್ಪೇನ್ ಪರ 30ನೇ ನಿಮಿಷದಲ್ಲಿ ಫ್ಯಾಬಿಯನ್ ರೂಯಿಜ್ ಮೊದಲ ಆಕರ್ಷಕ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ, ಪಂದ್ಯದ 41ನೇ ನಿಮಿಷದಲ್ಲಿ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಅದ್ಭುತ ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.

1-1 ಅಂತರದಿಂದ ಶುರುವಾದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಪಂದ್ಯವು ಹೆಚ್ಚುವರಿ ಸಮಯದ ಕಡೆಗೆ ಸಾಗುತ್ತಿದೆ ಎನ್ನುವಷ್ಟರಲ್ಲಿ, ಪಂದ್ಯದ ಚಿತ್ರಣವೇ ಬದಲಾಯಿತು.

ಬೆಲ್ಜಿಯಂನ ಖ್ಯಾತ ಗೋಲ್‌ಕೀಪರ್ ತಿಬೌಟ್ ಕೌರ್ಟೊಯಿಸ್ ಗಾಯಗೊಂಡು ಹೊರನಡೆದದ್ದು ಆ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಇದರ ಲಾಭ ಪಡೆದ ಸ್ಪೇನ್ ತಂಡದ ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ, 86ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಅವರನ್ನು ಮೈದಾನಕ್ಕಿಳಿಸಿದರು.

ಮೈದಾನ ಪ್ರವೇಶಿಸಿದ ಕೇವಲ ಎರಡೇ ನಿಮಿಷಗಳಲ್ಲಿ, ಅಂದರೆ 88ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಬೆಲ್ಜಿಯಂನ ಬದಲಿ ಗೋಲ್‌ಕೀಪರ್ ಸೆನ್ನೆ ಲ್ಯಾಮೆನ್ಸ್ ಮಾಡಿದ ತಪ್ಪನ್ನು ಬಳಸಿಕೊಂಡು ನಿರ್ಣಾಯಕ ವಿನ್ನಿಂಗ್ ಗೋಲು ಬಾರಿಸಿ ಸ್ಪೇನ್ ಪಾಳಯದಲ್ಲಿ ವಿಜಯೋತ್ಸವದ ಅಲೆ ಎಬ್ಬಿಸಿದರು.

ಇತಿಹಾಸ ಸೃಷ್ಟಿಸಿದ ಮೆರಿನೊ:

ಮೈಕೆಲ್ ಮೆರಿನೊ ವಿಶ್ವಕಪ್ ನಾಕೌಟ್ ಇತಿಹಾಸದಲ್ಲೇ ಬದಲಿ ಆಟಗಾರನಾಗಿ ಬಂದು ಸತತ ಎರಡು ಪಂದ್ಯಗಳಲ್ಲಿ ವಿನ್ನಿಂಗ್ ಗೋಲು ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.

  • ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಕೊನೆಯ ನಿಮಿಷಗಳ ವೇಳೆ ಮೈಕೆಲ್ ಮೆರಿನೊ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಜಯ ತಂದು ಕೊಟ್ಟಿದ್ದರು.
  • ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲೂ ನಿರ್ಣಾಯಕ ಹಂತದಲ್ಲಿ ಗೋಲು ಬಾರಿಸಿ ಸ್ಪೇನ್ ತಂಡವು ಸೆಮಿಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಸೆಮಿಫೈನಲ್ ಎದುರಾಳಿ ಯಾರು?

ವಿಶ್ವಕಪ್ ಜಯಿಸುವ ನೆಚ್ಚಿನ ತಂಡವಾಗಿ ಹೊರಹೊಮ್ಮಿರುವ ಸ್ಪೇನ್, ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತಂಡವು ತನ್ನ ಕ್ವಾರ್ಟರ್‌ಫೈನಲ್ ಕದನದಲ್ಲಿ ಮೊರಾಕೊ ತಂಡವನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದೆ.

ಇದನ್ನೂ ಓದಿ: ಸೋತರೂ ಇತಿಹಾಸ ನಿರ್ಮಿಸಿ ನಿರ್ಗಮಿಸಿದ ಆರ್ಥರ್ ಫೆರಿ

ಅದರಂತೆ ಜುಲೈ 14 ರಂದು ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ.

Published On - 8:26 am, Sat, 11 July 26

Follow Us