Xiaomi: ಪದಕ ಗೆದ್ದ ಭಾರತೀಯರಿಗೆ ಶವೋಮಿಯಿಂದ ಸ್ಮಾರ್ಟ್ಫೋನ್ ಗಿಫ್ಟ್: ಯಾವುದು ಗೊತ್ತಾ?
Tokyo Olympics: ವಿಶ್ವದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ಗುರುತಿಸಿಕೊಂಡಿರುವ ಶವೋಮಿ ಒಲಿಂಪಿಕ್ನಲ್ಲಿ ಪದಕವನ್ನು ಮುಡಿಗೇರಿಸಿಕೊಂಡ ಎಲ್ಲ ಕ್ರೀಡಾಪಟುಗಳಿಗೆ ಉಡುಗೊರೆ ನೀಡುವುದಾಗಿ ಹೇಳಿದೆ.
ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ 2020ಕ್ಕೆ (Tokyo Olympics) ಭಾನುವಾರ ತೆರೆಬಿದ್ದಿದೆ. ಭಾರತವು ಈ ಬಾರಿ ಒಟ್ಟು 7 ಪದಕಗಳನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆಯಿತು. ಈ ಮೂಲಕ ಈವರೆಗಿನ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದು ದಾಖಲೆ ಬರೆಯಿತು. ಭಾರತದ ಈ ವಿಶೇಷ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ, ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಅಲ್ಲದೆ ಇಂದು ಸಂಜೆ 6:30ಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೆಹಲಿಯ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಪದಕಕ್ಕೆ ಮುತ್ತಿಟ್ಟ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಿದ್ದಾರೆ. ಇದರ ನಡುವೆ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಶವೋಮಿ (Xiaomi) ಕಂಪೆನಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯರಿಗೆ ಸ್ಮಾರ್ಟ್ಫೋನ್ ಗಿಫ್ಟ್ ನೀಡುವುದಾಗಿ ಘೋಷಿಸಿದೆ.
ವಿಶ್ವದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ಗುರುತಿಸಿಕೊಂಡಿರುವ ಶವೋಮಿ ಒಲಿಂಪಿಕ್ನಲ್ಲಿ ಪದಕವನ್ನು ಮುಡಿಗೇರಿಸಿಕೊಂಡ ಎಲ್ಲ ಕ್ರೀಡಾಪಟುಗಳಿಗೆ ಉಡುಗೊರೆ ನೀಡುವುದಾಗಿ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶವೋಮಿಯ ಭಾರತದ ಎಮ್‌ಡಿ ಮನು ಕುಮಾರ ಜೈನ್, ಸ್ಮಾರ್ಟ್ ಫೋನ್ ತಯಾರಕರು ಒಲಿಂಪಿಕ್ಸ್ ಪದಕ ಗೆಲ್ಲಲು ತೆಗೆದುಕೊಳ್ಳುವ ಛಲ ಮತ್ತು ಸಮರ್ಪಣೆಯನ್ನು ಗೌರವಿಸುತ್ತಾರೆ. ಎಲ್ಲಾ ಭಾರತೀಯ ಒಲಿಂಪಿಕ್ ಪದಕ ವಿಜೇತರಿಗೆ ಎಂಐ 11 ಅಲ್ಟ್ರಾ ಸ್ಮಾರ್ಟ್ಫೋನನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ.
ಈ ಮೂಲಕ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ, ಕುಸ್ತಿಪಟು ರವಿ ಕುಮಾರ ದಹಿಯಾ, ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಪುರುಷರ ಹಾಕಿ ತಂಡ ಮತ್ತು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ಶವೋಮಿ ಕಡೆಯಿಂದ ಎಂಐ 11 ಅಲ್ಟ್ರಾ ಸ್ಮಾರ್ಟ್ಫೊನ್ ಉಡುಗೊರೆಯಾಗಿ ಸಿಗಲಿದೆ.
ಎಂಐ 11 ಅಲ್ಟ್ರಾ ವಿಶೇಷತೆ ಏನು?:
ಎಂಐ 11 ಅಲ್ಟ್ರಾ ಸ್ಮಾರ್ಟ್ಫೋನ್ 6.81 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ E4 AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 48 ಎಂಪಿ ಸೆನ್ಸಾರ್ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು ಅತ್ಯುತ್ತಮ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ.
ಹಾಗೆಯೇ ಎಂಐ 11 ಅಲ್ಟ್ರಾ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಬೆಲೆ 69,999 ರೂ. ಆಗಿದೆ. ಆದರೆ, ಪದಕ ಗೆದ್ದ ಭಾರತೀಯರಿಗೆ ಇದು ಉಚಿತವಾಗಿ ನೀಡಲು ಶವೋಮಿ ಮುಂದಾಗಿದೆ.
Tokyo Olympics: ಪದಕಕ್ಕೆ ಮುತ್ತಿಟ್ಟ ಭಾರತೀಯರಿಗೆ ಇಂದು ಸಂಜೆ ಪ್ರಧಾನಿ ಮೋದಿಯಿಂದ ಸನ್ಮಾನ
Xiaomi: ಇದೇ ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಪಟ್ಟಕ್ಕೇರಿದ ಶವೋಮಿ
(Xiaomi India Announce Mi 11 Ultra to gift each Indian medal winner athlete in Tokyo Olympics)
Published On - 1:26 pm, Mon, 9 August 21