Sunil Chhetri: ನಿವೃತ್ತಿ ನಿರ್ಧಾರವನ್ನು ಹಿಂಪಡೆದ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ
Sunil Chhetri Reverses Retirement: 2024ರ ಜೂನ್‌ನಲ್ಲಿ ಅಂತರರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಹೊಂದಿದ್ದ ಸುನಿಲ್ ಛೆಟ್ರಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ಮಾರ್ಚ್ 25 ರಂದು ಬಾಂಗ್ಲಾದೇಶದ ವಿರುದ್ಧ ನಡೆಯುವ ಏಷ್ಯನ್ ಕಪ್ ಅರ್ಹತಾ ಪಂದ್ಯಕ್ಕಾಗಿ ಅವರು ರಾಷ್ಟ್ರೀಯ ತಂಡಕ್ಕೆ ಮರಳುತ್ತಿದ್ದಾರೆ. 94 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿರುವ ಛೆಟ್ರಿ ಅವರ ಮರಳುವಿಕೆ ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಸಂತೋಷದ ಸುದ್ದಿಯಾಗಿದೆ.

ಕಳೆದ ಜೂನ್‌ನಲ್ಲಿ ಅಂದರೆ 2024 ರ ಜೂನ್ ತಿಂಗಳಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದ ಭಾರತದ ಕಾಲ್ಚೆಂಡಿನ ಚತುರ ಹಾಗೂ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಸುನಿಲ್ ಛೆಟ್ರಿ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಫಿಫಾ ಅಂತರರಾಷ್ಟ್ರೀಯ ವಿಂಡೋದಲ್ಲಿ ಸುನಿಲ್ ಛೆಟ್ರಿ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ನಾವು ಕಾಣಬಹುದಾಗಿದೆ. 2027 ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿನಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯ ಮಾರ್ಚ್ 25 ರಂದು ನಡೆಯಲಿದ್ದು, ಸುನಿಲ್ ಛೆಟ್ರಿ ಈ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕಳೆದ ವರ್ಷ ನಿವೃತ್ತಿ
40 ವರ್ಷದ ಸುನಿಲ್ ಛೆಟ್ರಿ ಕಳೆದ ವರ್ಷ ಜೂನ್‌ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದ್ದರು. ಕುವೈತ್ ವಿರುದ್ಧದ ಫಿಫಾ ಅರ್ಹತಾ ಪಂದ್ಯದಲ್ಲಿ ಭಾರತದ ಪರ ಕೊನೆಯ ಪಂದ್ಯವನ್ನಾಡಿದ್ದ ಸುನಿಲ್ ಛೆಟ್ರಿಗೆ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಂದ್ಯವು ಯಾವುದೇ ಗೋಲುಗಳಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಭಾರತದ ಪ್ರಯಾಣವು ಅಂತ್ಯಗೊಂಡಿತ್ತು. ಈ ಪಂದ್ಯದ ಬಳಿಕ ಸುನಿಲ್ ಛೆಟ್ರಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತರಾಗುತ್ತಿರುವುದಾಗಿ ಘೋಷಿಸಿದ್ದರು.
ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ನಂತರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಛೆಟ್ರಿ, ‘ವೀಡಿಯೊದಲ್ಲಿ ನನ್ನನ್ನು ನೋಡಿದವರು, ನನ್ನ ಆಟೋಗ್ರಾಫ್ ತೆಗೆದುಕೊಂಡವರು ಮತ್ತು ನನ್ನ ಹಳೆಯ ಬೆಂಬಲಿಗರು, ಎಲ್ಲರಿಗೂ ನಾನು ಪೂರ್ಣ ಹೃದಯದಿಂದ ಧನ್ಯವಾದ ಹೇಳುತ್ತೇನೆ. ನೀವೆಲ್ಲರೂ ಇಲ್ಲದಿದ್ದರೆ ಈ 19 ವರ್ಷಗಳು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದರು.
𝐒𝐔𝐍𝐈𝐋 𝐂𝐇𝐇𝐄𝐓𝐑𝐈 𝐈𝐒 𝐁𝐀𝐂𝐊. 🇮🇳
The captain, leader, legend will return to the Indian national team for the FIFA International Window in March.#IndianFootball ⚽ pic.twitter.com/vzSQo0Ctez
— Indian Football Team (@IndianFootball) March 6, 2025
ಅತಿ ಹೆಚ್ಚು ಗೋಲು ಗಳಿಸಿದ 4ನೇ ಆಟಗಾರ
ಸುನಿಲ್ 2005 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅಲ್ಲಿಂದ 2024 ರ ವರೆಗಿನ ಸುದೀರ್ಘ ವೃತ್ತಿಜೀವನದಲ್ಲಿ ಅವರು ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ಬಾರಿಸಿದ ನಾಲ್ಕನೇ ಆಟಗಾರ (94) ಎಂಬ ದಾಖಲೆಯನ್ನು ಸೃಷ್ಟಿಸಿದ್ದರು. ಹಾಗೆಯೇ ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ಡೇಯಿ ಮತ್ತು ಲಿಯೋನೆಲ್ ಮೆಸ್ಸಿ ನಂತರ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಛೆಟ್ರಿಗೆ 2011 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Thu, 6 March 25