Viral News: ಅಮ್ಮ ಬರೆದ ಪತ್ರ ಹಿಡಿದು ಏಕಾಂಗಿಯಾಗಿ 1,400 ಕಿ.ಮೀ ನಡೆದು ಉಕ್ರೇನ್ ಗಡಿ ದಾಟಿದ ಬಾಲಕ!

Russia- Ukraine War: ಆ ಬಾಲಕ ಒಂದು ಸಣ್ಣ ಬ್ಯಾಗ್, ಪಾಸ್ ಪೋರ್ಟ್ ಮತ್ತು ಆತನ ತಾಯಿ ಬರೆದ ಪತ್ರವೊಂದನ್ನು ಇಟ್ಟುಕೊಂಡು ಉಕ್ರೇನ್ ಗಡಿಯನ್ನು ತಲುಪಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

Viral News: ಅಮ್ಮ ಬರೆದ ಪತ್ರ ಹಿಡಿದು ಏಕಾಂಗಿಯಾಗಿ 1,400 ಕಿ.ಮೀ ನಡೆದು ಉಕ್ರೇನ್ ಗಡಿ ದಾಟಿದ ಬಾಲಕ!
ಏಕಾಂಗಿಯಾಗಿ ಉಕ್ರೇನ್ ಗಡಿ ದಾಟಿದ ಹುಡುಗ
Follow us
| Updated By: ಸುಷ್ಮಾ ಚಕ್ರೆ

Updated on: Mar 08, 2022 | 3:25 PM

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ (Russia War) ಯುದ್ಧ ಸಾರಿರುವುದರಿಂದ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್​ನಿಂದ ಸಾವಿರಾರು ವಿದೇಶೀಯರು ಈಗಾಗಲೇ ತಮ್ಮ ದೇಶಕ್ಕೆ ಹೋಗಿದ್ದಾರೆ. ಇನ್ನೂ ಅದೆಷ್ಟೋ ಜನರು ಉಕ್ರೇನ್ (Ukraine) ಗಡಿ ದಾಟಿ ತಮ್ಮ ದೇಶಕ್ಕೆ ಹೋಗಲು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಮಾನವೀಯತೆಯನ್ನು ಎತ್ತಿ ಹಿಡಿಯುವ, ಭಾವುಕರನ್ನಾಗಿಸುವ ಘಟನೆಗಳು ಕೂಡ ನಡೆಯುತ್ತಿವೆ. 11 ವರ್ಷದ ಉಕ್ರೇನಿಯನ್ ಬಾಲಕ ತನ್ನ ಬೆನ್ನಿಗೊಂದು ಬ್ಯಾಗ್ ಹಾಕಿಕೊಂಡು, ತನ್ನ ತಾಯಿ ಬರೆದಿದ್ದ ಪತ್ರವೊಂದನ್ನು ಹಿಡಿದುಕೊಂಡು, ಅಮ್ಮನ ಫೋನ್ ನಂಬರ್ ಇರುವ ಚೀಟಿಯೊಂದಿಗೆ 1,400 ಕಿ.ಮೀ. ನಡೆದು, ಉಕ್ರೇನ್ ಗಡಿಯನ್ನು ತಲುಪಿದ್ದಾನೆ. ಏಕಾಂಗಿಯಾಗಿ ಹಲವಾರು ದಿನಗಟ್ಟಲೆ ನಡೆದು, ಸ್ಲೋವಾಕಿಯಾವನ್ನು ದಾಟಿರುವ ಆ ಬಾಲಕನ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆ ಬಾಲಕ ಆಗ್ನೇಯ ಉಕ್ರೇನ್‌ನ ಝಪೊರಿಝಿಯಾದಿಂದ ಬಂದವನಾಗಿದ್ದು, ಇದು ಕಳೆದ ವಾರ ರಷ್ಯಾದ ಪಡೆಗಳು ವಶಪಡಿಸಿಕೊಂಡ ವಿದ್ಯುತ್ ಸ್ಥಾವರದ ಸ್ಥಳವಾಗಿದೆ. ವರದಿಗಳ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಸಂಬಂಧಿಯನ್ನು ನೋಡಿಕೊಳ್ಳಲು ಆತನ ಪೋಷಕರು ಉಕ್ರೇನ್‌ನಲ್ಲಿಯೇ ಉಳಿದುಕೊಳ್ಳಬೇಕಾಯಿತು. ಆದರೆ, ಏಕಾಂಗಿಯಾಗಿ ಆ 11 ವರ್ಷದ ಬಾಲಕ 1,400 ಕಿ.ಮೀ. ನಡೆದು, ಉಕ್ರೇನಿಯನ್ ಗಡಿಯನ್ನು ತಲುಪಿದ್ದಾನೆ.

ಆ ಹುಡುಗನ ತಾಯಿ ತಮ್ಮ ಸಂಬಂಧಿಕರನ್ನು ನೋಡಲು ರೈಲಿನಲ್ಲಿ ಸ್ಲೋವಾಕಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಉಕ್ರೇನ್​ನಲ್ಲಿ ಯಾವಾಗ ಎಲ್ಲಿಂದ ಗುಂಡು ಹಾರುತ್ತದೆ ಎಂದು ತಿಳಿಯದೆ ಜನರು ರಸ್ತೆಗೆ ಇಳಿಯಲು ಭಯಪಡುವ ಪರಿಸ್ಥಿತಿ ಉಂಟಾಗಿದೆ. ಇದರ ನಡುವೆ ಆ ಬಾಲಕ ಒಂದು ಸಣ್ಣ ಬ್ಯಾಗ್, ಪಾಸ್ ಪೋರ್ಟ್ ಮತ್ತು ಆತನ ತಾಯಿ ಬರೆದ ಪತ್ರವೊಂದನ್ನು ಇಟ್ಟುಕೊಂಡು ಉಕ್ರೇನ್ ಗಡಿಯನ್ನು ತಲುಪಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ukraine boy 1

ಏಕಾಂಗಿಯಾಗಿ ಉಕ್ರೇನ್ ಗಡಿ ದಾಟಿದ ಹುಡುಗ

ಆ ಹುಡುಗ ತನ್ನ ಮುಗ್ಧ ನಗುವಿನಿಂದಲೇ ಎಲ್ಲರ ಮನಸು ಗೆದ್ದಿದ್ದಾನೆ. ಆತನಿಗೆ ಸ್ವಯಂಸೇವಕರು ಆಹಾರ, ನೀರನ್ನು ನೀಡಿ ಬರಮಾಡಿಕೊಂಡಿದ್ದಾರೆ. ಆ ಹುಡುಗ ಹೇಳಿದ ತನ್ನ ಕತೆಯನ್ನು ಕೇಳಿ ಸ್ವಯಂಸೇವಕರು ಅಚ್ಚರಿಗೊಂಡಿದ್ದಾರೆ. ಆ ಹುಡುಗನು ಸ್ಲೋವಾಕಿಯಾಕ್ಕೆ ಬಂದಾಗ, ಅವನ ಕೈಯಲ್ಲಿ ಫೋನ್ ನಂಬರ್ ಇತ್ತು. ಆ ನಂಬರ್​ಗೆ ಫೋನ್ ಮಾಡಿ, ಆ ಬಾಲಕನ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ನಂತರ ಆತನ ಸಂಬಂಧಿಕರಿಗೆ ಆ ಬಾಲಕನನ್ನು ಒಪ್ಪಿಸಿದ್ದಾರೆ.

ವರದಿಗಳ ಪ್ರಕಾರ, ಬಾಲಕನ ತಾಯಿ ಸ್ಲೋವಾಕ್ ಸರ್ಕಾರ ಮತ್ತು ಆತನನ್ನು ನೋಡಿಕೊಳ್ಳುತ್ತಿರುವ ಪೊಲೀಸರಿಗೆ ಧನ್ಯವಾದ ಸಲ್ಲಿಸಲು ಸಂದೇಶವನ್ನು ಕಳುಹಿಸಿದ್ದಾರೆ. ಸ್ಲೋವಾಕಿಯಾದ ಆಂತರಿಕ ಸಚಿವಾಲಯವು ಆ ಹುಡುಗನ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್​ ಮಾಡಿದೆ.

ಅನಿವಾರ್ಯವಾಗಿ ಆತನ ಪೋಷಕರು ಉಕ್ರೇನ್​ನಲ್ಲಿಯೇ ಉಳಿದುಕೊಳ್ಳಬೇಕಾದ್ದರಿಂದ ಆತ ಏಕಾಂಗಿಯಾಗಿ ಗಡಿಯನ್ನು ತಲುಪಿದ್ದಾನೆ. ಗಡಿಯಲ್ಲಿ ಸ್ವಯಂ ಸೇವಕರು ಆತನ ಊಟ, ತಿಂಡಿಯ, ವಸತಿಯ ವ್ಯವಸ್ಥೆ ಮಾಡಿಕೊಟ್ಟು, ಆತನ ಮುಂದಿನ ಪ್ರಯಾಣಕ್ಕೂ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ, ಆ ಬಾಲಕನ ಜೊತೆ ಫೋಟೋ ತೆಗೆಸಿಕೊಂಡು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನೂ ಓದಿ: Russia- Ukraine War: ರಷ್ಯಾದ ದಾಳಿಯಿಂದ ಉಕ್ರೇನ್​ನ 202 ಶಾಲೆ, 34 ಆಸ್ಪತ್ರೆಗಳು ಧ್ವಂಸ

ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ