Viral: ಹೆತ್ತ ತಂದೆ ತಾಯಿಯನ್ನು ಅರಸುತ್ತಾ ಲಂಡನ್‌ನಿಂದ ಭಾರತಕ್ಕೆ ಬಂದ ಮಗಳು
ಬದುಕಿನಲ್ಲಿ ಯಾರು ಸುಖಿಗಳಿಲ್ಲ. ಪ್ರತಿಯೊಬ್ಬರು ತಮ್ಮ ಬಳಿ ಏನು ಇಲ್ಲವೋ ಅದನ್ನು ಪಡೆದುಕೊಳ್ಳುವುದರಲ್ಲೇ ತಮ್ಮ ಅರ್ಧ ಆಯುಷ್ಯವನ್ನು ಕಳೆಯುತ್ತಾರೆ. ಆದರೆ ಈ ಮಹಿಳೆಯ ಕಥೆ ವಿಭಿನ್ನ. ಈ ಮಹಿಳೆಗೆ ತಾನು ಎಲ್ಲಿ ಹುಟ್ಟಿದೆ ಎಂದು ತಿಳಿದಿಲ್ಲ. ತನ್ನ ತಂದೆ ಯಾರೆಂದು ತಿಳಿದಿಲ್ಲ. ತನಗೆ ಜನ್ಮ ನೀಡಿದ ತಾಯಿ ಇದ್ದಾಳೆಯೇ ಇಲ್ಲವೇ ಎಂಬುದು ಗೊತ್ತೇ ಇಲ್ಲ. ಹೀಗಿರುವಾಗ ಆದರೆ ತನಗೂ ಒಂದು ಕುಟುಂಬವಿದೆ ಎಂದು ಅರಿತುಕೊಂಡ ಮಹಿಳೆಯೊಬ್ಬಳು, ವಿದೇಶದಿಂದ ಹೆತ್ತವರನ್ನು ಹುಡುಕಿಕೊಂಡು ಭಾರತಕ್ಕೆ ಮರಳಿದ್ದಾಳೆ. ಇದೀಗ ಹೈದರಾಬಾದ್‌ನ ಬೀದಿಗಳಲ್ಲಿ ಹೆತ್ತವರಿಗಾಗಿ ಅಲೆದಾಡುತ್ತಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ

ಬದುಕು ಎಲ್ಲರದ್ದು ಒಂದೇ ರೀತಿ ಇರಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಹುಡುಕಾಟ. ಆದರೆ ಈ ಯುವತಿಯ ಕಥೆ ಕೇಳಿದ್ರೆ ನಿಮ್ಮ ಕರುಳು ಚುರ್ ಎನ್ನುತ್ತೆ. ತಂದೆ ತಾಯಿಯ ಪ್ರೀತಿಯನ್ನು ಕಾಣದ ಮಕ್ಕಳನ್ನು ಕಂಡಾಗ ಮನಸ್ಸು ಕರಗುತ್ತದೆ. ಇನ್ನು ತನ್ನ ತಾಯಿಯೂ ಯಾರೆಂದು ಹುಡುಕುವ ಸಂದರ್ಭಗಳು ಜೀವನದಲ್ಲಿ ಎದುರಾದ್ರೆ ಆ ಕ್ಷಣ ಹೇಗಿದ್ದೀರಬಹುದು ಎಂದು ಒಮ್ಮೆಯಾದ್ರು ಯೋಚಿಸಿದ್ದೀರಾ. ಆದರೆ ಈ ಮಹಿಳೆಯದ್ದು ಮಾತ್ರ ಇದೇ ಕಥೆ. ಈ ಮಹಿಳೆಯ ಹೆಸರು ಸಂಧ್ಯಾ ರಾಣಿ (Sandhya Rani). ತನ್ನ ತಂದೆ ತಾಯಿಯ ಯಾರೆಂದು ತಿಳಿಯದ ಮಹಿಳೆಗೆ ಈಕೆಯನ್ನು ಬೆಳೆಸಿದ ಕುಟುಂಬದಿಂದಲೇ ಈ ಸತ್ಯವು ತಿಳಿದಿದೆ. ಹೀಗಾಗಿ ದೂರದ ವಿದೇಶದಿಂದ ಭಾರತಕ್ಕೆ ಬಂದು, ಹೈದರಾಬಾದ್‌ನ (Hyderabad) ಬೀದಿಗಳಲ್ಲಿ ಅಲೆದಾಡುತ್ತಾ ತನ್ನ ಹೆತ್ತವರ ಹುಡುಕುವತ್ತ ಬ್ಯುಸಿಯಾಗಿದ್ದಾಳೆ.
2 ವರ್ಷ ಮಗುವಿದ್ದಾಗಲೇ ಅನಾಥಶ್ರಮಕ್ಕೆ ಸೇರಿಸಿದ್ದ ಸೋದರ ಮಾವ
1987 ರಲ್ಲಿ, ನಿಜಾಮ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ರಾಮಯ್ಯ ಎಂಬ ವ್ಯಕ್ತಿ ತನ್ನ ತಂಗಿಯನ್ನು ಅಬಿಡ್ಸ್‌ನ ಪ್ಯಾರಾಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜ್ ಕುಮಾರ್ ಎಂಬ ವ್ಯಕ್ತಿಗೆ ಮದುವೆ ಮಾಡಿದ. ಹೀಗಿರುವಾಗ ಈಗಾಗಲೇ ಕುಡಿತದ ಚಟಕ್ಕೆ ಬಿದ್ದಿದ್ದ ರಾಜ್ ಕುಮಾರ್ ತನ್ನ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈ ದಂಪತಿಗೆ ಜನಿಸಿದ್ದ ಮಗುವೇ ಈ ಸಂಧ್ಯಾರಾಣಿ. ಮಗುವಿಗೆ ಎರಡು ವರ್ಷ ತುಂಬುತ್ತಿದ್ದಂತೆ ಆಕೆಯ ತಂದೆ ಕುಟುಂಬವನ್ನೇ ತೊರೆದರು. ಇತ್ತ ತಾಯಿ ಎಲ್ಲಿಗೆ ಹೋದರು ತಿಳಿಯಲೇ ಇಲ್ಲ. ಈ ವೇಳೆಯಲ್ಲಿ ಮಾವ ರಾಮಯ್ಯ ಎರಡು ವರ್ಷದ ಮಗುವಾಗಿದ್ದ ಸಂಧ್ಯಾರಾಣಿಯನ್ನು ಅನಾಥಶ್ರಮಕ್ಕೆ ಸೇರಿಸಿದ್ದು, ಅಲ್ಲಿಂದ ಈಕೆಯ ಬದುಕು ಬದಲಾಗಿಯೇ ಹೋಯ್ತು.
ವಿದೇಶಿ ದಂಪತಿಯ ಮಡಿಲು ಸೇರಿದ ಕಂದಮ್ಮ
ಹೀಗಿರುವಾಗ ಸ್ವೀಡನ್‌ನ ಮಕ್ಕಳಿಲ್ಲದ ದಂಪತಿಗಳು ಸಂಧ್ಯಾ ರಾಣಿಯನ್ನು ಕಾನೂನುಬದ್ಧವಾಗಿ ದತ್ತು ಪಡೆದರು. ಭಾರತದಲ್ಲಿ ಹುಟ್ಟಿದ ಈ ಕಂದಮ್ಮ ವಿದೇಶಿ ದಂಪತಿಗಳ ಜೊತೆಗೆ ವಿದೇಶಕ್ಕೆ ಹಾರಿ ಬಿಟ್ಟಳು. ಪ್ರಾರಂಭದಲ್ಲಿಯೇ ಈ ದಂಪತಿ, ಸಂಧ್ಯಾ ರಾಣಿಗೆ ಚಿತ್ರಹಿಂಸೆ ನೀಡಲು ಶುರು ಮಾಡಿದ್ರು. ಹೀಗಿರುವಾಗ ಸಣ್ಣ ವಯಸ್ಸಿನಲ್ಲಿಯೇ ಈ ಸ್ವೀಡಿಷ್ ದಂಪತಿಗಳು ತನ್ನ ನಿಜವಾದ ಪೋಷಕರಲ್ಲ ಅವರ ನಡವಳಿಕೆಯಿಂದಲೇ ತಿಳಿಯಿತು.
ಎಲ್ಲವನ್ನು ದಿಕ್ಕರಿಸಿ ಲಂಡನ್‌ನತ್ತ ಸಂಧ್ಯಾಳ ಪಯಣ
ಆಕೆ ನೋಡಲು ಭಾರತೀಯರ ಹಾಗೆ ಇದ್ದ ಕಾರಣ ನೆರೆಹೊರೆಯವರು ಮತ್ತು ಸ್ನೇಹಿತರು ಅವಳನ್ನು ಕೀಳಾಗಿ ನೋಡುತ್ತಿದ್ದರು. ಸ್ವೀಡನ್‌ನಲ್ಲಿ ಸಾಕಷ್ಟು ಕಹಿ ಅನುಭವ ಎದುರಿಸಿದ ಬಳಿಕ ಸಂಧ್ಯಾರಾಣಿಯೂ ಒಬ್ಬಂಟಿಯಾಗಿ ಲಂಡನ್‌ಗೆ ಹೋದಳು. ಪ್ರಸಿದ್ಧ ವಿಶ್ವವಿದ್ಯಾಲಯಕ್ಕೆ ಸೇರಿ ಮನೋವಿಜ್ಞಾನದಲ್ಲಿ ಪದವಿ ಪಡೆದುಕೊಂಡಳು . ಈ ವೇಳೆಯಲ್ಲಿ ಸಂಧ್ಯಾರಾಣಿ ತನ್ನ ಸ್ನೇಹಿತನ ಸಹಾಯದಿಂದ ತನ್ನ ಸ್ವಂತ ಕುಟುಂಬವನ್ನು ಹುಡುಕಲು ನಿರ್ಧರಿಸಿದಳು. ಹೀಗಾಗಿ 2009 ರಲ್ಲಿ ಲಂಡನ್‌ನಿಂದ ಹೈದರಾಬಾದ್‌ಗೆ ಮೊದಲ ಬಾರಿಗೆ ಬಂದಳು. ಆದಾದ ಬಳಿಕ ನಾಲ್ಕು ಬಾರಿ ಹೈದರಾಬಾದ್‌ಗೆ ಬಂದು ಹೋಗಿದ್ದರೂ ತನ್ನ ಕುಟುಂಬ ಎಲ್ಲಿದೆ ಎಂದು ಕೊನೆಗೂ ತಿಳಿದುಕೊಂಡಳು.
ಇದನ್ನೂ ಓದಿ:Video: ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಅಪ್ಪನ ಸಾಧನೆಯನ್ನು ಸಂಭ್ರಮಿಸಿದ ಮಗ
ಕುಟುಂಬದ ಹುಡುಕಾಟಕ್ಕೆ ಕೈಜೋಡಿಸಿತು ಸಂಸ್ಥೆ
40 ವರ್ಷಗಳ ನಂತರದಲ್ಲಿ ಸಂಧ್ಯಾರಾಣಿ ತನ್ನ ತಂದೆಯನ್ನು ಹುಡುಕಲು ಹೈದರಾಬಾದ್‌ಗೆ ಮರಳಿದ್ದಾಳೆ. ತನ್ನ ಹೆತ್ತವರನ್ನು ಹುಡುಕುತ್ತಿರುವ ಈ ಮಹಿಳೆಗೆ ಪುಣೆಯ ಅಡಾಪ್ಟ್ ಕೌನ್ಸಿಲ್ ರೈಟ್ಸ್ ಸಂಸ್ಥೆ ಸಹಾಯ ಮಾಡುತ್ತಿದೆ. ಹೈದರಾಬಾದ್‌ಗೆ ನಾಲ್ಕು ಬಾರಿ ಭೇಟಿ ನೀಡಿದ ಸಂಧ್ಯಾ ರಾಣಿಗೆ ತನ್ನ ಕುಟುಂಬದ ಬಗ್ಗೆ ಸುಳಿವು ಸಿಕ್ಕಿದೆ. ಈಕೆಯ ಕುಟುಂಬವು ವಾರಂಗಲ್ ನವರಾಗಿದ್ದು, ತನ್ನ ತಂದೆ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ದೊರೆತಿದೆ. ಆದರೆ ತನ್ನ ತಾಯಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನ್ನ ಕುಟುಂಬದೊಂದಿಗೆ ಇರಲು, ಭಾರತದಲ್ಲಿ ಅವರೊಂದಿಗೆ ವಾಸಿಸಲು ಬಯಸುತ್ತೇನೆ ಎನ್ನುವ ಮಹಾದಾಸೆ ಸಂಧ್ಯಾ ರಾಣಿ ಅವರಿಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Mon, 15 September 25








