Viral Video: ಆಸ್ಪತ್ರೆಯ ಒಳಗೆ ನುಗ್ಗಿದ ಚಿರತೆ; ಸತತ 4 ಗಂಟೆಗಳ ಕಾರ್ಯಾಚರಣೆ ಹೇಗಿತ್ತು ನೋಡಿ 

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2023 | 6:39 PM

ಇತ್ತೀಚಿನ ದಿನಗಳಲ್ಲಿ  ಚಿರತೆಗಳ ಕಾಟ ತುಂಬಾನೇ ಹೆಚ್ಚಿದೆ. ಚಿರತೆಗಳು ಜನನಿಬಿಡ ಪ್ರದೇಶಗಳಿಗೆ ಬರುವಂತಹ ಘಟನೆಗಳು ಸಾಕಷ್ಟು ನಡೆಯುತ್ತಿವೆ.. ಈಗ ಅದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಇಲ್ಲಿನ ನಾಸಿಕ್ ಜಿಲ್ಲೆಯ ನಂದೂರ್ಬಾರ್ನಲ್ಲಿರುವ ಆದಿತ್ಯ ಆಸ್ಪತ್ರೆಯ ಒಳಗೆ ಏಕಾಏಕಿಯಾಗಿ ಚಿರತೆಯೊಂದು ನುಗ್ಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ರೋಗಿಗಳಲ್ಲಿ ಸಾಕಷ್ಟು ಆತಂಕವನ್ನು ಮೂಡಿಸಿದೆ. 

Viral Video: ಆಸ್ಪತ್ರೆಯ ಒಳಗೆ ನುಗ್ಗಿದ ಚಿರತೆ; ಸತತ 4 ಗಂಟೆಗಳ ಕಾರ್ಯಾಚರಣೆ ಹೇಗಿತ್ತು ನೋಡಿ 
ವೈರಲ್​​ ವಿಡಿಯೋ
Follow us on

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಲಗ್ಗೆ ಇಡುತ್ತಿರುವ ಘಟನೆಗಳು ಸಾಕಷ್ಟು ಹೆಚ್ಚುತ್ತಿವೆ. ಇದಕ್ಕೆಲ್ಲಾ ಮುಖ್ಯ ಕಾರಣ ಕಾಡುಗಳ ನಾಶ ಅಂತಾನೇ ಹೇಳಬಹುದು. ಹೌದು ಈಗಂತೂ ಕಾಡಿನಲ್ಲಿರುವ ಆನೆಗಳು, ಚಿರತೆ, ದೈತ್ಯ ಹೆಬ್ಬಾವುಗಳು ಆಹಾವನ್ನರಸುತ್ತಾ, ಜನರು ವಾಸಿಸುವಂತಹ ಪ್ರದೇಶಗಳತ್ತ ಬರುತ್ತಿವೆ. ಅದರಲ್ಲೂ ಈ ಚಿರತೆಗಳು ಅದೆಷ್ಟೋ ಜೀವಗಳನ್ನು  ಬಲಿ ತೆಗೆದುಕೊಂಡಂತಹ ಘಟನೆಗಳು ಕೂಡ ನಡೆದಿವೆ.  ಈಗ ಇಂತಹದ್ದೇ ಘಟನೆಯೊಂದು ಮಹರಾಷ್ಟ್ರದಲ್ಲಿ ನಡೆದಿದೆ.  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಂದೂರ್ಬಾರ್ನಲ್ಲಿರುವ  ಆದಿತ್ಯ ಆಸ್ಪತ್ರೆಯೊಳಗೆ  ಮಂಗಳವಾರ ರಾತ್ರಿ ಚಿರತೆಯೊಂದು ಏಕಾಏಕಿಯಾಗಿ ನುಗ್ಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ರೋಗಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ಸ್ವಚ್ಛತಾ ಸಿಬ್ಬಂದಿಗೆ ಕಾಣಿಸಿಕೊಂಡ ಚಿರತೆ:

ಇಂದು ಬೆಳಗ್ಗೆ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ, ಸ್ವಚ್ಛತಾ ಸಿಬ್ಬಂದಿಯೊಬ್ಬರಿಗೆ ಆಸ್ಪತ್ರೆಯ ಮೂಲೆಯಲ್ಲಿ ಯಾವುದೋ ಪ್ರಾಣಿ ಘರ್ಜಿಸುವಂತಹ  ಸದ್ದು ಕೇಳಿಸಿದೆ. ಅದೇನೆಂದು ನೋಡಲು ಹೋದಾಗ, ಅವರಿಗೆ  ಅಲ್ಲಿ ಒಂದು ಮೂಲೆಯಲ್ಲಿ ಚಿರತೆ ಕಾಣಿಸಿಕೊಂಡಿದೆ.  ತಕ್ಷಣ ಅವರು ತಮ್ಮ ಸಮಯ ಪ್ರಜ್ಞೆಯಿಂದ ಬಾಗಿಲನ್ನು ಮುಚ್ಚಿ ಚಿರತೆಯನ್ನು ಕೂಡಿಹಾಕಿ, ಚಿರತೆ ಇರುವ ಮಾಹಿತಿಯನ್ನು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಆಸ್ಪತ್ರೆಯ ಸಿಬ್ಬಂದಿ ತಕ್ಷಣ  ಅರಣ್ಯ ಇಲಾಖೆಗೆ ಮಾಹಿತಿಯನ್ನು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿರತೆಯನ್ನು ಕಂಡು ಅಲ್ಲಿನ ಸಿಬ್ಬಂದಿಗಳು ಮತ್ತು ರೋಗಿಗಳು ಆತಂಕಕ್ಕೊಳಗಾಗಿದ್ದಾರೆ. ಮತ್ತು ಈ ಸುದ್ದಿಯನ್ನು ತಿಳಿದು ಚಿರತೆಯನ್ನು ನೋಡಲೆಂದು ಆಸ್ಪತ್ರೆಯ ಹೊರಗಡೆ ಹಲವಾರು ಜನರು ಕೂಡಾ ಜಮಾಯಿಸಿದ್ದರು.

ಇದನ್ನೂ ಓದಿ: 95 ವರ್ಷ ಹಳೆಯ ಬ್ರಿಟಿಷ್ ಇಂಡಿಯಾದ ಪಾಸ್‌ಪೋರ್ಟ್ ಹೇಗಿತ್ತು ನೋಡಿ

ಆಸ್ಪತ್ರೆಯ ಸಿಬ್ಬಂದಿಯ ಕರೆಗೆ ಓಗೊಟ್ಟು ತಕ್ಷಣ ಆಸ್ಪತ್ರೆಯ ಬಳಿ ಬಂದ ಅರಣ್ಯಾಧಿಕಾರಿಗಳು ಸತತ ನಾಲ್ಕು ಗಂಟೆಗಳ  ಕಾರ್ಯಾಚರಣೆಯ  ಬಳಿಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋ ವೈರಲ್​ ಇಲ್ಲಿದೆ:

ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ, ಈ ಮೊದಲು ಜೂನ್ ತಿಂಗಳಲ್ಲಿ ನಂದೂರ್ಬಾರ್ ನಲ್ಲಿ ಮಹಿಳೆಯೊಬ್ಬರು ಚಿರತೆಯ ದಾಳಿಗೆ ಬಲಿಯಾಗಿದ್ದರು, ಅಲ್ಲದೆ ಇದೇ ನವೆಂಬರ್ ತಿಂಗಳಿನಲ್ಲಿ ಎರಡು ಚಿರತೆಗಳು ನಾಸಿಕ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದವು, ಅವುಗಳನ್ನು  ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲಾ ಘಟನೆಗಳು ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿದ್ದು, ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ನೋಡಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 5:55 pm, Wed, 13 December 23