Viral: ಬರೋಬ್ಬರಿ 56 ಲಕ್ಷ ರೂ. ಗಳಿಗೆ ಮಾರಾಟವಾದ 1950ರ ದಶಕದ ಭಾರತೀಯ ಕರೆನ್ಸಿ ನೋಟು
ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಹಳ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು 100 ರೂ. ಮುಖಬೆಲೆಯ ವಿಶೇಷ ಭಾರತೀಯ ಕರೆನ್ಸಿ ನೋಟೊಂದು ಬರೋಬ್ಬರಿ 56 ಲಕ್ಷ ರೂಪಾಯಿಗೆ ಹರಾಜಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗಿವೆ. ಅಷ್ಟಕ್ಕೂ 1950 ರ ದಶಕದ ಈ ನೋಟಿನ ವಿಶೇಷತೆ ಏನು ಎಂಬುದನ್ನು ನೋಡೋಣ ಬನ್ನಿ.
ಐತಿಹಾಸಿಕ ವಸ್ತುಗಳು, ಕ್ರಿಕೆಟರ್ಸ್ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟ ಇತ್ಯಾದಿ ವಸ್ತುಗಳನ್ನು ಹರಾಜು ಹಾಕುವುದನ್ನು ಆಗಾಗ್ಗೆ ನೋಡುತ್ತೇವೆ. ಹೀಗೆ ಹರಾಜಿಗಿಟ್ಟ ವಸ್ತುಗಳನ್ನು ಲಕ್ಷಾಂತರ ಹಾಗೂ ಕೋಟ್ಯಾಂತರ ರೂಪಾಯಿಗಳಿಗೆ ಖರೀದಿಸುವ ಸಾಕಷ್ಟು ಜನರಿದ್ದಾರೆ. ಅದೇ ರೀತಿ ಇಲ್ಲೊಂದು ಹರಾಜು ಪ್ರಕ್ರಿಯೆ ನಡೆದಿದ್ದು, ಈ ಹರಾಜಿನಲ್ಲಿ ನೂರು ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟು ಬರೋಬ್ಬರಿ 56 ಲಕ್ಷ ರೂ. ಗಳಿಗೆ ಮಾರಾಟವಾಗಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಬಹಳ ಅಪರೂಪದ ಕರೆನ್ಸಿ ನೋಟು ಇದು:
ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 100 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನೋಟು ಬರೋಬ್ಬರಿ 56,49,650 ರೂ. ಗಳಿಗೆ ಮಾರಾಟವಾಗಿದೆ. ಇದನ್ನು ‘ಹಜ್ ನೋಟು’ ಎಂದು ಕರೆಯಲಾಗುತ್ತದೆ. 20 ನೇ ಶತಮಾನದ ಮಧ್ಯದಲ್ಲಿ, ಅಂದ್ರೆ 1950 ರ ದಶಕದಲ್ಲಿ ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುತ್ತಿದ್ದ ಭಾರತೀಯ ಯಾತ್ರಾರ್ಥಿಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವಿಶೇಷ ಕರೆನ್ಸಿ ನೋಟನ್ನು ಬಿಡುಗಡೆ ಮಾಡಿತ್ತು. ಅಕ್ರಮ ಚಿನ್ನ ಖರೀದಿಯನ್ನು ತಡೆಯುವ ಉದ್ದೇಶದಿಂದ ಈ ಹಜ್ ನೋಟನ್ನು ಬಿಡುಗಡೆ ಮಾಡಲಾಗಿತ್ತು.
ಈ ನೋಟುಗಳು ಸಾಮಾನ್ಯ ಭಾರತೀಯ ನೋಟುಗಳಿಗಿಂತ ವಿಭಿನ್ನ ಬಣ್ಣದ್ದಾಗಿದ್ದವು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್‌ನಂತಹ ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಈ ನೋಟು ಕಾನೂನುಬದ್ಧ ಟೆಂಡರ್ ಆಗಿದ್ದರೂ, ಈ ನೋಟುಗಳು ಭಾರತದಲ್ಲಿ ಮಾನ್ಯವಾಗಿರಲಿಲ್ಲ. 1970 ರಲ್ಲಿ ಆರ್‌ಬಿಐ ಈ ಹಜ್ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಿತು. ಈ ವಿಶೇಷ ನೋಟು ಇದೀಗ ಭಾರೀ ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂತು ರಾಮ ಮಂದಿರ ವಿನ್ಯಾಸದ ಸ್ಪೆಷಲ್ ವಾಚ್; ಈ ವಿಶೇಷ ಆವೃತ್ತಿ ವಾಚ್ ಬೆಲೆ ಎಷ್ಟು ಗೊತ್ತಾ?
ಅಪರೂಪದ 10 ರೂಪಾಯಿ ನೋಟು 6.90 ಲಕ್ಷಕ್ಕೆ ಮಾರಾಟವಾಗಿದೆ:
ಅಷ್ಟು ಮಾತ್ರವಲ್ಲದೆ ಇತ್ತೀಚಿಗೆ ನಡೆದ ಹರಾಜಿನಲ್ಲಿ 10 ರೂ.ಗಳ ಎರಡು ಅಪರೂಪದ ನೋಟುಗಳು ಕೂಡ ಮಾರಾಟವಾಗಿದೆ. ಒಂದು 6.90 ಲಕ್ಷಕ್ಕೆ ಮಾರಾಟವಾದರೆ ಇನ್ನೊಂದು ನೋಟು 5.80 ಲಕ್ಷ ರೂ. ಗಳಿಗೆ ಮಾರಾಟವಾಗಿದೆ. ಮಾಹಿತಿಗಳ ಪ್ರಕಾರ ಈ ಎರಡೂ ನೋಟುಗಳು ಐತಿಹಾಸಿಕ ಮಹತ್ವವನ್ನು ಹೊಂದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ