
ಬೆಂಗಳೂರು, ಮೇ 25: ಸ್ವಾರ್ಥಿಗಳೇ (selfish) ತುಂಬಿರುವ ಜನರ ನಡುವೆ ಬೇರೆಯವರಿಗೆ ಸಹಾಯ ಮಾಡುವ ಗುಣ, ಒಳ್ಳೆಯ ಮನಸ್ಸು ಕಾಣಸಿಗುವುದು ಕಡಿಮೆಯೇ. ಇದೆಲ್ಲದರ ನಡುವೆ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ತಾವು ಮಾಡುವ ಸಣ್ಣ ಪುಟ್ಟ ಕೆಲಸಗಳಿಂದಲೇ ಹೀರೋಗಳಾಗುತ್ತಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಬೆಂಗಳೂರಿನ (Bengaluru) ಈ ಮಹಿಳೆ. ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ನೀಡಿ ಉಪಚರಿಸುತ್ತಿದ್ದಾರೆ ಈ ಮಹಿಳೆ. ಅವರ ಈ ಒಳ್ಳೆಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
ಜಗದೀಶ್ ನಡನಳ್ಳಿ (Jagadish Nadanalli) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನ ಮಹಿಳೆಯ ಒಳ್ಳೆಯ ಕಾರ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಕಸ ತೆಗೆದುಕೊಂಡು ಹೋಗಲು ಮನೆಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವುದನ್ನು ಕಾಣಬಹುದು. ಈ ವೇಳೆ ಪೌರ ಕಾರ್ಮಿಕರು, ಮಹಿಳೆಯೊಂದಿಗೆ ಪ್ರೀತಿಯಿಂದ ಮಾತನಾಡುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋದೊಂದಿಗೆ ಜಗದೀಶ್ ಅವರು, ಈ ಮಹಿಳೆಯ ಮಾಡುವ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ. ನಾವು ನೀವುಗಳು ಬಡವರು, ವೃದ್ಧ ನಾಗರಿಕರು, ಆಟೋ ಚಾಲಕರು ಮತ್ತು ರಸ್ತೆಬದಿಯ ಮಾರಾಟಗಾರರಿಗೆ ಸಹಾಯ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ ಇವರು ಮಾತ್ರ ಭಿನ್ನವಾಗಿ ಕಾಣುತ್ತಾರೆ. ಯಾವುದೇ ಪ್ರಚಾರ ಬಯಸದೇ ಅಥವಾ ಹಣ ಗಳಿಸುವ ಉದ್ದೇಶವಿಲ್ಲದೆ ಕಳೆದ ಕೆಲವು ವರ್ಷಗಳಿಂದ ಇತರರಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಈ ಕೆಲಸವನ್ನು ಕೇವಲ ಅವರ ಆತ್ಮತೃಪ್ತಿಗಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಪ್ರದೇಶಕ್ಕೆ ಬರುವ ನೈರ್ಮಲ್ಯ ಕಾರ್ಮಿಕರಿಗೆ ಅವರು ನಿಯಮಿತವಾಗಿ ಕಾಫಿ, ಬ್ರೆಡ್, ಬಿಸ್ಕೆಟ್ ಹಾಗೂ ಬಾಳೆಹಣ್ಣುಗಳನ್ನು ನೀಡುತ್ತಾರೆ. ಕೆಲವೊಮ್ಮೆ ಬಗೆಬಗೆಯ ತಿನಿಸುಗಳು, ಅಗತ್ಯ ವಸ್ತುಗಳನ್ನು ಕೂಡ ನೀಡುತ್ತಾರೆ. ಇನ್ನು ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗಾಗಿ ಹಾಲು, ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಾರೆ. ಮನೆಯ ಟೆರೇಸ್ ಮೇಲೆ ಪಕ್ಷಿಗಳಿಗೆ ಧಾನ್ಯಗಳು, ನೀರನ್ನು ಕೂಡ ಇಡುವುದು ಅವರ ನಿತ್ಯದ ಕಾಯಕಗಳಲ್ಲಿ ಒಂದಾಗಿದೆ ಎಂದು ಮಹಿಳೆಯ ಕೆಲಸವನ್ನು ಶ್ಲಾಘಿಸಿದ್ದಾರೆ.
ಹಸು, ಕರುಗಳೊಂದಿಗೆ ಮನೆ ಬಾಗಿಲಿಗೆ ಬರುವವರನ್ನು ಮಾತನಾಡಿಸುತ್ತಾರೆ. ತರಕಾರಿ, ಹೂವು ಹಾಗೂ ಹಣ್ಣು ಮಾರಾಟಗಾರರನ್ನು ತಮ್ಮ ಕುಟುಂಬ ಸದಸ್ಯರಂತೆ ಭಾವಿಸುತ್ತಾರೆ. ಕೆಲವು ಸಲ ಅವರಿಗೆ ಮಾರಾಟಗಾರರಿಂದ ಖರೀದಿಸಲು ಏನು ಇರಲ್ಲ. ಈ ವ್ಯಾಪಾರಿಗಳೊಂದಿಗೆ ಮಾತನಾಡಲೆಂದೇ ಅವರ ಮನೆಗೆ ಭೇಟಿ ನೀಡುತ್ತಾರೆ. ಪ್ರತಿದಿನ ಇತರರಿಗೆ ಸಹಾಯ ಮಾಡುವ ಇಂತಹ ವ್ಯಕ್ತಿಯನ್ನು ನಾನು ಎಂದಿಗೂ ನೋಡಿಲ್ಲ. ಆಕೆ ಒಬ್ಬ ಮಹಾನ್ ತಾಯಿಯಂತೆ ಕಾಣಿಸುತ್ತಾಳೆ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: 4 ಕಿ.ಮೀ ಕ್ರಮಿಸಲು 45 ನಿಮಿಷಗಳು ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ಬಗ್ಗೆ ಅಸಮಾಧಾನ ಹೊರಹಾಕಿದ ಗೂಗಲ್ ಟೆಕ್ಕಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ವಿಡಿಯೋ ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಆಕೆಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಸುತ್ತಲೂ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈಗಿನ ಕಾಲದಲ್ಲಿ ಇಂತಹ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ವಿರಳ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ