Viral: ತಡರಾತ್ರಿ ಮನೆ ತಲುಪಿಸಿದ ಆಟೋ ಚಾಲಕಿಯ ಸಹಾಯವನ್ನು ನೆನೆದ ಬೆಂಗಳೂರಿನ ಉದ್ಯಮಿ
ಇತ್ತೀಚೆಗಿನ ದಿನಗಳಲ್ಲಿ ಜೀವನ ನಿರ್ವಹಣೆಗಾಗಿ ಆಟೋ ಓಡಿಸಿ ಜೀವನ ನಡೆಸುವ ಮಹಿಳೆಯರನ್ನು ನೀವು ನೋಡಿರುತ್ತೀರಿ. ಆದರೆ ಬೆಂಗಳೂರಿನ ಉದ್ಯಮಿಯೊಬ್ಬರು ತಮಗಾದ ಅನುಭವವನ್ನು ಹಂಚಿಕೊಂಡು ಹೆಚ್ಚಿನ ಮಹಿಳಾ ಆಟೋ ಚಾಲಕಿಯರು ಬೇಕು ಎಂದು ಹೇಳಿದ್ದಾರೆ. ಇವರ ಈ ಮಾತು ನೆಟ್ಟಿಗರ ಮನಸ್ಸನ್ನು ತಟ್ಟಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಅಕ್ಟೋಬರ್ 17: ಆಟೋ ಚಾಲಕರ ಮಾನವೀಯ ಕಾರ್ಯ, ಪ್ರಾಮಾಣಿಕತೆಗಳಿಗೆ ಸಂಬಂಧಪಟ್ಟ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಕೈಯಲ್ಲಿ ದುಡ್ಡಿಲ್ಲ ಮನೆಯವರೆಗೆ ಬಿಡ್ಬಹುದಾ ಎಂದು ಕೇಳಿದರೆ ಹಿಂದೆ ಮುಂದೆ ನೋಡದೇ ಸಹಾಯ ಮಾಡುವ ಆಟೋ ಚಾಲಕರು ಇದ್ದಾರೆ. ಹೀಗಿರುವಾಗ ಬೆಂಗಳೂರು (Bengaluru) ಮೂಲದ ಉದ್ಯಮಿ ಮತ್ತು ಲೇಖಕರೊಬ್ಬರು ನಗರದಲ್ಲಿ ಮಹಿಳಾ ಆಟೋ ಚಾಲಕಿಯೊಬ್ಬರು (female auto driver) ತಡರಾತ್ರಿ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ತಡರಾತ್ರಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಆಟೋ ಚಾಲಕಿಯ ಒಳ್ಳೆತನವನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ವರುಣ್ ಅಗರ್ವಾಲ್ (Varun Agarwal) ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿನಲ್ಲಿ ತಡರಾತ್ರಿ ಆದ ಅನುಭವ ಹಂಚಿಕೊಂಡಿದ್ದಾರೆ. ಹಲವಾರು ಆಟೋ ಚಾಲಕರು ತಮ್ಮನ್ನು ಕೋರಮಂಗಲಕ್ಕೆ ಕರೆದೊಯ್ಯಲು ನಿರಾಕರಿಸಿದ ನಂತರ ಇಂದಿರಾನಗರದಲ್ಲಿ ಸಿಲುಕಿಕೊಂಡೆ. ಕೋರಮಂಗಲಕ್ಕೆ ಹೋಗಲು ಯಾವುದೇ ಆಟೋ ಸಿದ್ಧರಿರಲಿಲ್ಲ. ಎಲ್ಲಾ ಆಟೋ ಚಾಲಕರು ಆಗಲ್ಲ ಎಂದೇ ಹೇಳಿದರು. ಆದರೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಮಹಿಳಾ ಚಾಲಕಿಯನ್ನು ಗಮನಿಸುವ ಮೊದಲು ನಾನು ಸುಮಾರು ಒಂದು ಕಿಲೋಮೀಟರ್ ನಡೆದು ಬಂದಿದ್ದೇ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
So l was stuck in Indiranagar without a cab. No auto was willing to go to Koramangala and every auto guy said no to me.
I must have walked for almost a kilometre when I found this lady auto driver parked on the side of the road.
She said it was late and was going home. As I…
— Varun Agarwal (@varun067) October 16, 2025
ನಾನು ಆ ಮಹಿಳಾ ಆಟೋ ಚಾಲಕಿ ಬಳಿ ಕೇಳಿದಾಗ ತಡವಾಗಿದೆ. ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದಳು. ನಾನು ಹೊರಟು ನಿಂತಾಗ ಅವಳು ನನ್ನನ್ನು ಕರೆದು ನನ್ನನ್ನು ಮನೆಗೆ ಬಿಡುವುದಾಗಿ ಹೇಳಿದಳು. ರಾತ್ರಿ ಕೋರಮಂಗಲಕ್ಕೆ ಕರೆದೊಯ್ಯಲು ಒಪ್ಪಿಕೊಂಡಳು. ಉಬರ್ ಪ್ರಯಾಣ ದರ ಸುಮಾರು 300 ರೂ ಆಗಿದ್ದರೂ, ಪ್ರಯಾಣಕ್ಕೆ ಆಕೆ ಕೇವಲ 200 ರೂ ಶುಲ್ಕ ವಿಧಿಸಿದ್ದಾಳೆ. ನಾನು ಅವಳಿಗೆ ಅದು ತುಂಬಾ ಕಡಿಮೆ ಎಂದು ಹೇಳಿದೆ. ಕೊನೆಗೆ ನಾನು 300 ರೂ ಪಾವತಿಸಲು ಒತ್ತಾಯಿಸಿದೆ. ಇದು ಅತ್ಯುತ್ತಮ ಆಟೋ ಅನುಭವಗಳಲ್ಲಿ ಒಂದಾಗಿದೆ. ನಮಗೆ ಹೆಚ್ಚಿನ ಮಹಿಳಾ ಆಟೋ ಚಾಲಕಿಯರು ಬೇಕು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Viral: ಕೋಟಿಗಟ್ಟಲೇ ಬೆಲೆಬಾಳುವ ಮನೆ, ತಿಂಗಳಿಗೆ 3 ಲಕ್ಷ ರೂ ಆದಾಯ, ಆದ್ರೂ ಬೆಂಗಳೂರಿನಲ್ಲಿ ಆಟೋ ಓಡಿಸುವ ವ್ಯಕ್ತಿ
ಅಕ್ಟೋಬರ್ 16 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬ ತಾಯಿಯ ಹೃದಯವುಳ್ಳ ಆಟೋ ಚಾಲಕಿ ಎಂದಿದ್ದಾರೆ. ಮತ್ತೊಬ್ಬರು ಆ ಆಟೋ ಚಾಲಕಿ ನಿಮ್ಮಲ್ಲಿರುವ ಅಸಹಾಯಕತೆಯನ್ನು ಕಂಡಳು. ತಾಯಿಯ ಹೃದಯ ಮಾತ್ರ ಆ ನೋವನ್ನು ನಿಜವಾಗಿಯೂ ಅನುಭವಿಸಬಲ್ಲದು. ಅವಳು ನಿಮಗೆ ಏಕೆ ಸಹಾಯ ಮಾಡಿದಳು ಎಂದು ನಮಗೆ ತಿಳಿದಿಲ್ಲ. ಅವಳು ಯಾವುದೋ ಒಂದು ಕಾರಣಕ್ಕಾಗಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಸಾಧ್ಯತೆ ಇರಬಹುದು. ನಮ್ಮ ಪ್ರೀತಿಪಾತ್ರರು ಪ್ರತಿದಿನ ನಮಗಾಗಿ ಪ್ರಾರ್ಥಿಸುವುದರಿಂದ ಒಳ್ಳೆಯ ವ್ಯಕ್ತಿಗಳನ್ನು ನಮಗೆ ಕಳುಹಿಸಲಾಗಿದೆ. ಎಲ್ಲಾ ಸಮಯದಲ್ಲೂ ಕೃತಜ್ಞರಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಸ್ವಾರ್ಥದ ನಡುವೆ ಒಳ್ಳೆಯ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಆಟೋ ಚಾಲಕಿಯ ಮಾಡಿದ ಸಹಾಯ ವನ್ನು ಸದಾ ನೆನಪಿಸುತ್ತ ಇರಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








