
ಬೆಂಗಳೂರು, ಸೆಪ್ಟೆಂಬರ್ 23: ಕಂಪನಿ ಅಂದ ಮೇಲೆ ಅಲ್ಲಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇರುವುದು ಸರ್ವೆ ಸಾಮಾನ್ಯ. ಆದರೆ ಇದೀಗ ಬೆಂಗಳೂರು (Bengaluru) ಮೂಲದ ಉದ್ಯಮಿಯೊಬ್ಬರು, ತಮ್ಮ ಕಂಪನಿಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಎಕ್ಸ್ ಪೋಸ್ಟ್ ಟೀಕೆಗೆ ಕಾರಣವಾಗಿದೆ.
ಕಾರ್ತಿಕ್ (Karthik SG) ತಮ್ಮ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಇದಕ್ಕಾಗಿ ಕ್ಷಮಿಸಿ, ಆದರೆ ದೀರ್ಘಕಾಲದ ಚರ್ಚೆ ಮತ್ತು ವಾದ-ವಿವಾದದ ನಂತರ ಇಂದು ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದೇವೆ. ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಹಾಗೂ ಮಧ್ಯ ಪ್ರದೇಶ ಈ ನಾಲ್ಕು ರಾಜ್ಯಗಳಿಂದ ಬರುವ ಯಾವುದೇ ಪುರುಷ ಅಭ್ಯರ್ಥಿಗಳನ್ನು ನಾವು ನಮ್ಮ ಕಂಪನಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ನಮ್ಮಲ್ಲಿ ಈಗಾಗಲೇ ರಾಜಸ್ಥಾನದ ಒಬ್ಬ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಅವರು ಇದನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಮೇಲೆ ನೀಡಿದ ನಿರ್ದಿಷ್ಟ ರಾಜ್ಯವೊಂದರ ಪುರುಷ ಉದ್ಯೋಗಿಯೊಬ್ಬರು ಕಂಪನಿಯ ಮಹಿಳಾ ಸಿಬ್ಬಂದಿಯೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸಿದ್ದರು. ಹೀಗಾಗಿ ಮಹಿಳಾ ಉದ್ಯೋಗಿಗಳ ಕಾಳಜಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾರ್ತಿಕ್ ಶೆಣೈ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ 2.5 ಗಂಟೆಯಲ್ಲೇ ಜಾಬ್ ಕಳೆದುಕೊಂಡ ವ್ಯಕ್ತಿ, ಅಸಲಿ ಕಾರಣ ಇಲ್ಲಿದೆ ನೋಡಿ
ಸೆಪ್ಟೆಂಬರ್ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ಬಳಕೆದಾರ ಇದು ಅತ್ಯಂತ ವೃತ್ತಿಪರತೆಯಿಲ್ಲದ ನಡೆ ಎಂದು ಟೀಕಿಸಿದ್ದಾರೆ. ಇನ್ನೊಬ್ಬರು, ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ರಾಜ್ಯದ ಪುರುಷರನ್ನು ಹೊಣೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ಯಾವ ರೀತಿ ನಿಯಮ, ಈ ರೀತಿಯಾದ್ರೆ ಪುರುಷರಿಗೆ ಉದ್ಯೋಗನೇ ಸಿಗಲ್ಲ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರ ಪ್ರತಿಕ್ರಿಯೆಗೆ ಸಿಇಒ, ನನ್ನ ಕಂಪನಿ, ನನ್ನ ನಿಯಮಗಳು ತಮ್ಮ ನಿರ್ಧಾರ ಸರಿಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ