BYJUs : ‘ಎಡ್ಟೆಕ್ (Edtech) ಕಂಪೆನಿಯು ನನಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದೆ. ಅಕಸ್ಮಾತ್ ರಾಜೀನಾಮೆ (Resignation) ನೀಡಲಿದ್ದಲ್ಲಿ, ಆ.1ರಿಂದ ಸಂಬಳವನ್ನು ಕಡಿತಗೊಳಿಸಲಾಗುವುದು ಎಂದೂ ಬೆದರಿಕೆ ಒಡ್ಡಿದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ ನನ್ನ ದುಡಿಮೆಯಿಂದಲೇ ನನ್ನ ಇಡೀ ಮನೆ ನಡೆಯುತ್ತದೆ. ಈ ಕಂಪೆನಿಯಿಂದ ಬರಬೇಕಾಗಿರುವ ನನ್ನ ಹಣ ನನಗೆ ಸಿಗದಿದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬೈಜೂಸ್ನಲ್ಲಿ ಶಿಕ್ಷಣ ತಜ್ಞೆಯಾಗಿರುವ ಆಕಾಂಶಾ ಖೇಮ್ಕಾ ಮನನೊಂದು, ಕಣ್ಣೀರು ಹಾಕುತ್ತ ಈ ವಿಷಯವನ್ನು ವಿಡಿಯೋ ಮಾಡಿ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಆಕಾಂಕ್ಷಾ ಅವರಿಗೆ ಸಮಾಧಾನ ಹೇಳುತ್ತ ಧೈರ್ಯ ತುಂಬುತ್ತಿದ್ದಾರೆ.
‘ನನ್ನ ನಡೆವಳಿಕೆ ಮತ್ತು ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಮ್ಯಾನೇಜರ್ ನನ್ನನ್ನು ಕೆಲಸದಿಂದ ವಜಾ ಮಾಡಿರುವುದಾಗಿ ಹೇಳಿದ್ದಾರೆ. ಈ ವಿಷಯವಾಗಿ ಸರ್ಕಾರದಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ. ನನಗೆ ಈಗ ಯಾವುದೇ ದಾರಿಗಳು ಕಾಣುತ್ತಿಲ್ಲ, ಸೂಕ್ತ ನ್ಯಾಯ ದೊರೆಯದಿದ್ದರೆ ಸಾವಿಗೆ ಶರಣಾಗಬೇಕಾಗುತ್ತದೆ, ದಯವಿಟ್ಟು ಸಹಾಯ ಮಾಡಿ. ಜು. 28 ರೊಳಗೆ ನಾನು ಈ ಕೆಲಸವನ್ನು ಬಿಡಬೇಕು ಅಲ್ಲದೆ ಆಗಸ್ಟ್ 1ರಂದು ನನಗೆ ಸಂಬಳವನ್ನೂ ನೀಡಲಾಗುವುದಿಲ್ಲ ಎಂದು ಮೀಟಿಂಗ್ನಲ್ಲಿ ಹೇಳಿದ್ದಾರೆ. ಆದರೆ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಾಲ ಬೇರೆ ಬಾಕಿ ಇದೆ. ಈಗ ಬೈಜೂಸ್ ಕೊಡಬೇಕಾಗಿರುವ ಹಣವನ್ನು ಕೊಡದಿದ್ದರೆ ಹೇಗೆ ಜೀವನ ಸಾಗಿಸಬೇಕು? ಎಂದಿದ್ದಾರೆ ಆಕೆ.
ಇದನ್ನೂ ಓದಿ : Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!
ಈ ವಿಡಿಯೋ ಅನ್ನು ಆಕೆ ಲಿಂಕ್ಡ್ಇನ್ನಲ್ಲಿ ಅಪ್ಲೋಡ್ ಮಾಡಿದಾಗಿನಿಂದ ಸಾಮಾಜಿಕ ಜಾಲತಾಣಿಗರು ಅವರಿಗೆ ಬೆಂಬಲಿಸುತ್ತಿದ್ದಾರೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಹೊಸ ಉದ್ಯೋಗ ಹುಡುಕಲು ನಿಮಗೆ ಸಹಾಯ ಬೇಕಾದರೆ ನನ್ನನ್ನು ಸಂಪರ್ಕಿಸಿ. ದುಡುಕಬೇಡಿ, ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ ಹಲವಾರು ಜನ. ನಿಮಗೆ ಆ ದೇವರು ಒಳ್ಳೆಯ ತಿರುವನ್ನು ಕೊಡಲಿ ಎಂದು ಹಾರೈಸಿದ್ದಾರೆ ಅನೇಕರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:56 am, Fri, 28 July 23