ಪ್ರೇಯಸಿಯ ಆರೈಕೆಯಲ್ಲಿ 30 ವರ್ಷ ಕಳೆದ ರಿಯಲ್ ಪ್ರೇಮಿಯ ಕಥೆಯಿದು
ಪ್ರೀತಿಯೇ ಹಾಗೆ, ಪರಿಶುದ್ಧವಾಗಿ ಪ್ರೀತಿಸುವ ವ್ಯಕ್ತಿಗಳ ಬದುಕಿನಲ್ಲಿ ಏನೇ ನಡೆಯಲಿ, ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುತ್ತಾರೆ. ಇದಕ್ಕೆ ಸಾಕ್ಷಿ ಈ ಘಟನೆ. ತಾನು ಪ್ರೀತಿಸುವ ಹುಡುಗಿಯೂ ಪಾರ್ಶ್ವವಾಯುವಿಗೆ ತುತ್ತಾಗುತ್ತಾಳೆ. ಈ ಸಮಯದಲ್ಲಿ ಆಕೆಯನ್ನು ಬಿಟ್ಟು ಕೊಡದೇ ಸರಿಸುಮಾರು 30 ವರ್ಷಗಳ ಕಾಲ ತನ್ನ ಪ್ರೇಮಿಯನ್ನು ತಾನೇ ಆರೈಕೆ ಮಾಡಿದ್ದಾನೆ. ಹಾಗಾದ್ರೆ ಈ ಘಟನೆ ನಡೆದದ್ದು ಎಲ್ಲಿ, ಈ ಕುರಿತಾದ ಮಾಹಿತಿ ಇಲ್ಲಿದೆ.

ಚೀನಾ, ಆಗಸ್ಟ್ 12 : ಪ್ರೀತಿಗೆ ಕಣ್ಣಿಲ್ಲ, ಈ ಎರಡಕ್ಷರ ಪ್ರೀತಿ (love) ಹುಟ್ಟಲು ಕಾರಣವಂತೂ ಬೇಕಿಲ್ಲ ಆದರೆ ಈಗಿನ ಕಾಲದಲ್ಲಿ ಪರಿಶುದ್ಧ ಪ್ರೀತಿಯನ್ನು ನೋಡೋದೇ ಕಷ್ಟ. ಹೀಗಾಗಿ ಹುಡುಗ ಹುಡುಗಿಯರ ನಡುವಿನ ಪ್ರೀತಿಗೆ ಗ್ಯಾರಂಟಿ ಅನ್ನೋದೇ ಇಲ್ಲ. ನೀನಿಲ್ಲದೇ ಹೋದರೆ ಇನ್ನೊಬ್ಬರು ಎನ್ನುವ ಮನೋಭಾವವು ಎಲ್ಲರಲ್ಲೂ ಬೆಳೆದಿದೆ. ಈ ಎಲ್ಲರ ನಡುವೆ ಈ ಶುದ್ಧ ಪ್ರೀತಿಯನ್ನು ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ. ತನ್ನ ಗೆಳತಿಯ ಬದುಕಿನ ಅತಿ ಕ್ರೂರ ಕ್ಷಣದಲ್ಲಿ ಗೆಳೆಯ ಜೊತೆ ನಿಂತಿದ್ದಾನೆ. ಒಂದಲ್ಲ ಎರಡಲ್ಲ ಬರೋಬ್ಬರಿ 30 ವರ್ಷಗಳ ಕಾಲ ತನ್ನ ಪ್ರೇಮಿಯ ಜೊತೆಗೆ ಇದ್ದು ಆಕೆಯ ಆರೈಕೆಯ ಜವಾಬ್ದಾರಿ ಹೊತ್ತು ಕೊಂಡಿದ್ದಾನೆ. ಇದು ಚೀನಿ ದಂಪತಿಯ (Chinese couple) ಪರಿಶುದ್ಧವಾದ ಪ್ರೇಮ ಕಥೆ. ಈ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಸ್ಟೋರಿ ಇಲ್ಲಿದೆ.
ಪ್ರೀತಿ ಚಿಗುರಿ ಒಂದು ತಿಂಗಳಲ್ಲೇ ಬದುಕು ಅಲ್ಲೋಲ ಕಲ್ಲೋಲ
ಇದು 1992 ರಲ್ಲಿ ಚಿಗುರಿದ ಪ್ರೇಮ ಕಥೆ. ಶು ಜಿಲಿ ಎಂಬ ವ್ಯಕ್ತಿಗೆ ಆ ಸಮಯದಲ್ಲಿ ವಯಸ್ಸು 29 ವರ್ಷ ಆಗಿತ್ತು. ಬಡಗಿಯಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯೂ 21 ವರ್ಷದ ಯುವತಿ ಹುವಾಂಗ್ ಕುಯಿಯನ್ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಭೇಟಿಯಾದರು. ಮೊದಲ ಭೇಟಿಯಲ್ಲೇ ಕಳೆದು ಹೋದ ಈ ಜೋಡಿ ಆ ನಂತರದಲ್ಲಿ ಡೇಟಿಂಗ್ ಮಾಡಲು ಶುರು ಮಾಡಿದರು. ಇಬ್ಬರೂ ಕೂಡ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸಿದರು.
ಹೀಗಿರುವಾಗ ಕುಟುಂಬವನ್ನು ಭೇಟಿ ಮಾಡಲು ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಇವರ ಬಾಳಲ್ಲಿ ವಿಧಿ ಆಟ ಆಡಿಯೇ ಬಿಟ್ಟಿತು. ಬಸ್ ಅಪಘಾತ ಸಂಭವಿಸಿ ಬಸ್ 70 ಮೀಟರ್ ಆಳದ ಕಂದಕಕ್ಕೆ ಉರುಳಿತು. ಅದೃಷ್ಟವಶಾತ್ ಇಬ್ಬರೂ ಬದುಕಿ ಉಳಿದರು. ಶು ಜಿಲಿ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಪ್ರೇಮಿ ಹುವಾಂಗ್ ಬೆನ್ನುಮೂಳೆಗೆ ತೀವ್ರ ತರಹ ಪೆಟ್ಟಾಗಿತ್ತು. ಇದರಿಂದ ಪಾರ್ಶ್ವವಾಯುವಿಗೆ ತುತ್ತಾದಳು. ಬದುಕಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಈ ಜೋಡಿಯ ಬದುಕಿಗೆ ಮುಳ್ಳಾಗಿದ್ದೇ ಇದು.
ತನ್ನ ಜೀವನವನ್ನೇ ಪ್ರೇಯಸಿಗಾಗಿ ಮುಡಿಪಾಗಿಟ್ಟ ಪ್ರೇಮಿ
ಶು ಜಿಲಿಯೂ ಹುವಾಂಗ್‌ಳನ್ನು ಪ್ರೀತಿಸಲು ಶುರು ಮಾಡಿ ಒಂದು ತಿಂಗಳು ಆಗಿತ್ತು ಅಷ್ಟೇ. ಆಕೆಯ ಆರೋಗ್ಯ ಹದಗೆಟ್ಟ ವೇಳೆ ಆಕೆಯಿಂದ ದೂರ ಸರಿಯಬಹುದಿತ್ತು. ಆದರೆ ಶು ಮಾತ್ರ ಗಟ್ಟಿ ನಿರ್ಧಾರ ಮಾಡಿದ್ದ. ತನ್ನ ಗೆಳತಿಗೆ ಧೈರ್ಯವಾಗಿ ಹಾಗೂ ಬಲವಾಗಿ ಉಳಿದ. ತನ್ನ ಇಡೀ ಜೀವನವನ್ನೇ ಆಕೆಗಾಗಿ ಮುಡಿಪಾಗಿಸಲು ಸಿದ್ಧನಾದ. ಆತನ ಕುಟುಂಬದವರು ಆಕೆಯನ್ನು ಬಿಟ್ಟು ಬಿಡು, ಬೇರೆ ಯುವತಿಯೊಂದಿಗೆ ಮದುವೆಯಾಗು, ಹೀಗೆ ನಾನಾ ರೀತಿಯಲ್ಲಿ ಬುದ್ಧಿವಾದ ಹೇಳಿದರೂ ಕೇಳಲಿಲ್ಲ. ಆತನ ಮನಸ್ಸಿನಲ್ಲಿದದ್ದು ಹುವಾಂಗ್ ಸುಂದರ ಯುವತಿ ಮಾತ್ರ. ಡೇಟಿಂಗ್ ಮಾಡುವ ಸಂದರ್ಭದಲ್ಲಿ ಆಕೆಯ ಜೊತೆಗೆ ಜೀವನದುದ್ದಕ್ಕೂ ಇರುವೆ, ಚೆನ್ನಾಗಿ ನೋಡಿಕೊಳ್ಳುವೆ ಎನ್ನುವ ಭರವಸೆ ನೀಡಿದ್ದಾನಂತೆ, ಅದರಂತೆ ನಡೆದುಕೊಂಡ.
ಇತ್ತ ಹುವಾಂಗ್ ತನ್ನ ಅಪಘಾತವಾಗಿದೆ ತನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ತನ್ನ ಮನೆಯವರಿಗೆ ತಿಳಿಸದೇ ಇಲ್ಲ. ತನ್ನ ಪ್ರೇಮಿಯೇ ಈ ಸಮಯದಲ್ಲಿ ಜೊತೆಗೆ ನಿಲ್ಲುತ್ತಾನೆ ಎನ್ನುವ ಭರವಸೆ ಆಕೆಯದ್ದು. ಶು ಜಿಲಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹುವಾಂಗ್‌ಳನ್ನು ತನ್ನ ಮನೆಗೆ ಕರೆ ತಂದ. ದಿನದ ಇಪ್ಪತ್ತಾನಾಲ್ಕು ಗಂಟೆ ಆಕೆಯ ಪಕ್ಕದಲ್ಲೇ ಕುಳಿತು ಆಕೆಯ ಆರೈಕೆಯಲ್ಲೇ ದಿನಗಳನ್ನು ಕಳೆದ. ಆ ಸಂದರ್ಭದಲ್ಲಿ ಆಕೆಗೆ ಬೇಕಾದ ಶೌಚಾಲಯದಿಂದ ಎಲ್ಲಾ ವ್ಯವಸ್ಥೆಯನ್ನು ಮಾಡಿ, ಹೀಗೆ ಸರಿಸುಮಾರು ಮೂವತ್ತು ವರ್ಷಗಳ ಕಾಲ ಆಕೆಗೆ ಪ್ರತಿಯೊಂದು ವಿಚಾರದಲ್ಲಿ ನೆರಳಾಗಿದ್ದ.
ಇದನ್ನೂ ಓದಿ: Viral: ಗರ್ಭಿಣಿ ಪತ್ನಿಗಾಗಿ ಕೋಟಿ ಕೋಟಿ ಸಂಬಳದ ಕೆಲಸ ತ್ಯಜಿಸಿದ ವ್ಯಕ್ತಿ
30 ವರ್ಷಗಳ ಕಾಯುವಿಕೆಯ ಪ್ರೀತಿಗೆ ಕೊನೆಗೂ ಬಿತ್ತು ಮದುವೆಯ ಮುದ್ರೆ
ಈ ಘಟನೆ ನಡೆದ ಇಪ್ಪತ್ತಾರು ವರ್ಷಗಳ ಹುವಾಂಗ್ ತಂದೆ ಈಕೆಯನ್ನು ಹುಡುಕುತ್ತ ಬಂದರು. ತಂದೆಗೆ ತನ್ನ ಮಗಳ ಪರಿಸ್ಥಿತಿ ಹಾಗೂ ಈ ಸಮಯದಲ್ಲಿ ಜೊತೆಗೆ ನಿಂತ ಶು ಜಿಲಿ ಎಂಬ ಯುವಕನ ಬಗ್ಗೆ ತಿಳಿಯಿತು. ಹೀಗಿರುವಾಗ ಸರಿಸುಮಾರು ಮೂವತ್ತು ವರ್ಷಗಳ ತನಗಾಗಿ ಕಾದ ಹಾಗೂ ತನ್ನ ಜೊತೆಗೆ ನಿಂತ ತನ್ನ ಪ್ರೇಮಿಯೊಂದಿಗೆ ತನ್ನ ಬದುಕಿನ ನಾಳೆಯನ್ನು ಮುಂದುವರೆಸಲು ಈಕೆ ನಿರ್ಧರಿಸಿದಳು. ಹೀಗಾಗಿ ಹುವಾಂಗ್ ತನ್ನ ಮದುವೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿ ತಮ್ಮ ಇಷ್ಟು ವರ್ಷದ ಪ್ರೀತಿಯನ್ನು ಮದುವೆ ಹಂತಕ್ಕೆ ತೆಗೆದುಕೊಂಡು ಹೋದಳು. ಈ ಪರಿಶುದ್ಧ ಪ್ರೇಮಕಥೆಯೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಕಥೆಯೂ ಬಳಕೆದಾರರು ಕಣ್ಣನ್ನು ಒದ್ದೆಯಾಗಿಸಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Tue, 12 August 25








