ಜ್ವಾಲಾಮುಖಿಯ ವಿಡಿಯೋ ಮಾಡಲು ಹೋಗಿ ಕೈ ಸುಟ್ಟುಕೊಂಡ! ಬೆಂಕಿಯ ಕೆನ್ನಾಲಿಗೆಗೆ ಡ್ರೋನ್ ಆಹುತಿ
ಯಾವಾಗ ಡ್ರೋನ್ ಜ್ವಾಲಾಮುಖಿ ಸಿಡಿಯುತ್ತಿದ್ದ ಜಾಗಕ್ಕೆ ಸಮೀಪಿಸಿತೋ ಆಗ ಅವಘಡ ಸಂಭವಿಸಿದೆ. ಅತಿ ಹೆಚ್ಚು ಶಾಖ ಹೊರಹೊಮ್ಮಿಸುವ ಬೆಂಕಿಯ ಕೆನ್ನಾಲಿಗೆ ಹತ್ತಿರಕ್ಕೆ ಡ್ರೋನ್ ಹೋಗುತ್ತಿದ್ದಂತೆಯೇ ಸಂಪರ್ಕ ಕಡಿದುಕೊಂಡಿದೆ.
ಪ್ರಕೃತಿಯಲ್ಲಿ ಘಟಿಸುವ ಅಪರೂಪ ಮತ್ತು ಅಸಾಧಾರಣ ಸಂಗತಿಗಳಲ್ಲಿ ಮನುಷ್ಯ ಇಂದಿಗೂ ಕುತೂಹಲ ಕಳೆದುಕೊಂಡಿಲ್ಲ. ಆಗಸದಲ್ಲಿನ ಉಲ್ಕಾಪಾತದಿಂದ ಹಿಡಿದು ಭೂಮಿಯ ಮೇಲಾಗುವ ಜ್ವಾಲಾಮುಖಿ ತನಕ ಪ್ರತಿಯೊಂದು ಘಟನೆಗಳನ್ನೂ ಅಧ್ಯಯನಕ್ಕೆ ಒಳಪಡಿಸಬೇಕೆಂದೂ, ದಾಖಲಿಸಿಡಬೇಕೆಂದೂ ಹಂಬಲಿಸುವುದು ಮಾನವನ ಸಹಜ ತುಡಿತ. ಇಂತಹದ್ದೇ ಬಯಕೆಯಿಂದ ಚಿಮ್ಮುವ ಜ್ವಾಲಾಮುಖಿಯ ದೃಶ್ಯಗಳ್ನು ಸೆರೆಹಿಡಿಯಲು ಹೋದ ವ್ಯಕ್ತಿಯೊಬ್ಬ ಕೈ ಸುಟ್ಟುಕೊಂಡಿದ್ದಾನೆ. ಅರೆರೆ! ಇದೇನಪ್ಪಾ, ದೃಶ್ಯ ಸೆರೆ ಹಿಡಿಯಲು ಹೋಗಿ ಜ್ವಾಲಾಮುಖಿಯೊಳಗೇ ಕೈ ಇಟ್ಟುಬಿಟ್ಟನಾ ಪುಣ್ಯಾತ್ಮ ಎಂದು ಭಾವಿಸಬೇಡಿ. ಇಲ್ಲಿ ಕೈ ಸುಟ್ಟುಕೊಂಡಿದ್ದಾನೆ ಎಂದಿದ್ದು ಆತ ಸಾಹಸ ಮಾಡಲು ಹೋಗಿ ಅದಕ್ಕಾಗಿ ದುಬಾರಿ ಮೊತ್ತ ತೆತ್ತಿದ್ದಾನೆ ಎಂಬ ಕಾರಣಕ್ಕೆ.
ಜ್ವಾಲಾಮುಖಿಯ ಕೆನ್ನಾಲಿಗೆಯ ಸಮೀಪಕ್ಕೆ ದುಬಾರಿ ಡ್ರೋನ್ ಹಾರಿಸಿದ್ದ ವ್ಯಕ್ತಿ ಅದರೊಳಗೆ ಏನೆಲ್ಲಾ ಆಗುತ್ತದೆ ಎಂದು ಜಗತ್ತಿಗೇ ಪರಿಚಯಿಸುವ ಉತ್ಸುಕತೆಯಲ್ಲಿದ್ದ. ಆದರೆ, ದುರದೃಷ್ಟವಶಾತ್ ಆತನ ಹೊಚ್ಚಹೊಸಾ ಡ್ರೋನ್ ಪರಿಕರವನ್ನೇ ಜ್ವಾಲಾಮುಖಿ ಗುಳುಂ ಸ್ವಾಹಾ ಮಾಡಿದೆ. ಯೂಟ್ಯೂಬರ್ ಹಾಗೂ ಡ್ರೋನ್ ಆಪರೇಟರ್ ಜೋ ಹೆಮ್ಸ್ ಎಂಬಾತ ಈ ಸಾಹಸ ಮಾಡಲು ಹೋಗಿ ಡ್ರೋನ್ ಕಳೆದುಕೊಂಡಿದ್ದು, ಕೊನೆ ಕ್ಷಣದ ತನಕ ಸೆರೆಯಾಗಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಜೆಐ ಎಫ್ಪಿವಿ ಎಂಬ ನೂತನ ಡ್ರೋನ್ ಖರೀದಿಸಿದ್ದ ಜೋ ಹೆಮ್ಸ್, ಪೆನಿನ್ಸುಲಾ ಸಮೀಪದ ಗೆಲ್ಡಿಂಗ್ಯಾಡಲಿರ್ ಕಣಿವೆ ಬಳಿಯ ಜ್ವಾಲಾಮುಖಿಯನ್ನು ಸೆರೆ ಹಿಡಿಯಲು ಉತ್ಸುಕನಾಗಿದ್ದ. ರೀಕ್ಜವಿಕ್ ಐಲ್ಯಾಂಡ್ನಿಂದ ಸುಮಾರು 40 ಕಿ.ಮೀ ದೂರದಲ್ಲಿ ಮಾರ್ಚ್ 19ರಿಂದ ಉಕ್ಕುತ್ತಿರುವ ಈ ಜ್ವಾಲಾಮುಖಿಯನ್ನು ಅತಿ ಸನಿಹದಿಂದ ಜಗತ್ತಿಗೆ ಪರಿಚಯಿಸಬೇಕೆಂದು ಬಯಸಿದ್ದ. ಅದೇ ಕಾರಣಕ್ಕಾಗಿ ತನ್ನ ಹೊಸಾ ಡ್ರೋನ್ ಕ್ಯಾಮೆರಾವನ್ನು ಜ್ವಾಲಾಮುಖಿ ಸಮೀಪಕ್ಕೆ ಹಾರಿಸಿದ್ದ ಆತ ಕೆಲ ನಿಮಿಷಗಳ ಕಾಲ ಯಶಸ್ವಿಯಾಗಿ ಅದನ್ನು ಚಿತ್ರೀಕರಿಸಿದ್ದ.
ಆದರೆ, ಯಾವಾಗ ಡ್ರೋನ್ ಜ್ವಾಲಾಮುಖಿ ಸಿಡಿಯುತ್ತಿದ್ದ ಜಾಗಕ್ಕೆ ಸಮೀಪಿಸಿತೋ ಆಗ ಅವಘಡ ಸಂಭವಿಸಿದೆ. ಅತಿ ಹೆಚ್ಚು ಶಾಖ ಹೊರಹೊಮ್ಮಿಸುವ ಬೆಂಕಿಯ ಕೆನ್ನಾಲಿಗೆ ಹತ್ತಿರಕ್ಕೆ ಡ್ರೋನ್ ಹೋಗುತ್ತಿದ್ದಂತೆಯೇ ಸಂಪರ್ಕ ಕಡಿದುಕೊಂಡಿದೆ. ಘಟನೆ ಬಳಿಕ ಈ ಬಗ್ಗೆ ತನ್ನ ಅನಿಸಿಕೆ ಹಂಚಿಕೊಂಡಿರುವ ಜೋ ಹೆಮ್ಸ್, ಜ್ವಾಲಾಮುಖಿಯ ಸಮೀಪದಲ್ಲಿ ಅತಿಯಾದ ಬಿಸಿ ಗಾಳಿ ಹಾಗೂ ಒತ್ತಡ ಇರುವುದು ಸಾಮಾನ್ಯವಾಗಿದ್ದು, ಅಂತಹ ಪ್ರದೇಶದಲ್ಲಿ ಡ್ರೋನ್ ಹಾರಿಸುವುದೇ ಕಷ್ಟವಾಗಿದೆ. ಅಲ್ಲದೇ, ಬೆಂಕಿಯುಗುಳುವ ಜತೆಗೆ ಕೆಲ ಕಲ್ಲುಗಳೂ ಸಿಡಿದು ಹಾರುವುದರಿಂದ ಹತ್ತಿರದಲ್ಲಿ ನಿಂತು ಚಿತ್ರೀಕರಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾನೆ.
ಡ್ರೋನ್ ಸಾಧನವು ಜ್ವಾಲಾಮುಖಿಗೆ ಹತ್ತಿರಾಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೇ 26ರಂದು ಈ ವಿಡಿಯೋವನ್ನು ಜೋ ಹಂಚಿಕೊಂಡಿದ್ದಾನೆ. ಡ್ರೋನ್ನ ಕೊನೆ ಕ್ಷಣ ಹೇಗಿತ್ತು, ಅದು ಜ್ವಾಲಾಮುಖಿಗೆ ಎಷ್ಟು ಸಮೀಪಿಸಿತ್ತು ಎಂದು ತೋರಿಸುವ ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಕ್ಷಣಾ ಪಡೆಗಳ 2 ಡ್ರೋನ್ ಹೊಡೆದುರುಳಿಸಿದ್ದಾಗಿ ಆಡಿಯೋ ಬಿಡುಗಡೆ ಮಾಡಿದ ನಕ್ಸಲರು; ಅವರಲ್ಲಿ ಭಯ ಶುರುವಾಗಿದೆ ಎಂದ ಐಜಿ
ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!
Published On - 3:06 pm, Wed, 2 June 21