Viral Post: ವಯಸ್ಸು ಮೀರಿ ಹೋಗಿದೆ, ಇನ್ಯಾವಾಗ ಮದುವೆ; ಹುಟ್ಟು ಹಬ್ಬದ ದಿನವೇ ಯುವತಿಗೆ ಹೆತ್ತವರ ಪ್ರಶ್ನೆ

ಹುಡುಗಿಯರಿಗೆ  22 ವರ್ಷ ತುಂಬಿದ್ರೆ ಸಾಕು, ಮನೆಯಲ್ಲಿ ಗಂಡು  ಹುಡುಕೋಕೆ ಶುರು ಮಾಡಿಯೇ ಬಿಡುತ್ತಾರೆ. ಇನ್ನೇನಾದ್ರೂ, ವಯಸ್ಸು ಮೀರಿದರೂ ಮದುವೆಯಾಗದಿದ್ರೆ ಹೆಣ್ಣಿನ ಬಗ್ಗೆ ಈ ಸಮಾಜವು ಚುಚ್ಚು ಮಾತುಗಳನ್ನಾಡುತ್ತದೆ. ಒಂದು ಲೆಕ್ಕದಲ್ಲಿ ಹುಡುಗಿಯರಿಗೆ ಮದುವೆ ವಿಚಾರದಲ್ಲಿ ಒತ್ತಡ ತುಸು ಹೆಚ್ಚೇ ಇರುತ್ತದೆ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಇಲ್ಲೊಂದು ಪೋಸ್ಟ್ ವೈರಲ್ ಆಗಿದ್ದು, ಹುಟ್ಟು ಹಬ್ಬದ ದಿನವೇ ಯುವತಿಯೊಬ್ಬಳಿಗೆ ಆಕೆಯ ಪೋಷಕರು ವಯಸ್ಸು ಮೀರಿ ಹೋಗಿದೆ, ಇನ್ಯಾವಾಗ ಮದುವೆ ಎಂದು ಪ್ರಶ್ನೆ ಮಾಡಿದ್ದಾರೆ. 

Viral Post: ವಯಸ್ಸು ಮೀರಿ ಹೋಗಿದೆ, ಇನ್ಯಾವಾಗ ಮದುವೆ; ಹುಟ್ಟು ಹಬ್ಬದ ದಿನವೇ ಯುವತಿಗೆ ಹೆತ್ತವರ ಪ್ರಶ್ನೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2024 | 10:30 AM

ಹುಟ್ಟು, ಸಾವು, ಮದುವೆ ಈ ಮೂರು ದೇವರ ಇಚ್ಛೆಎಂಬ ಮಾತಿದೆ. ಹೀಗಿದ್ದರೂ ಕೂಡಾ ಇಂದಿಗೂ ನಮ್ಮ  ಸಮಾಜದಲ್ಲಿ ಹುಡುಗಿಯರು 25 ವರ್ಷ ದಾಟಿದರೂ ಮದುವೆಯಾಗದಿದ್ರೆ ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇಲ್ಲವೇ ಚುಚ್ಚು ಮಾತುಗಳನ್ನಾಡುತ್ತಾರೆ. ಇದಕ್ಕೆ ಪೋಷಕರು ಹಾಗೂ ಕುಟುಂಬಸ್ಥರೂ ಕೂಡಾ ಹೊರತಲ್ಲ. ಹೌದು ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ಸೆರಗಿಗೆ ಕೆಂಡ ಕಟ್ಟಿಕೊಂಡಂತೆ ಎಂದು ಭಯಪಟ್ಟು  ನೀನು ಓದಿ ಗುಡ್ಡೆ ಹಾಕೋದು ಗೊತ್ತಿದೆ, ಬೇಗ ಮದುವೆಯಾಗು ಅಂತೆಲ್ಲಾ ಹೇಳುತ್ತಿರುತ್ತಾರೆ. ಒಂದು ಲೆಕ್ಕದಲ್ಲಿ ಹುಡುಗಿಯರಿಗೆ ಮದುವೆ ವಿಚಾರದಲ್ಲಿ ಮಾನಸಿಕ ಒತ್ತಡ  ತುಸು ಹೆಚ್ಚೇ ಇರುತ್ತದೆ. ಅದೇ ರೀತಿ ಇಲ್ಲೊಂದು ಯುವತಿಗೂ ಹುಟ್ಟು ಹಬ್ಬದ ದಿನವೇ ವಯಸ್ಸು ಮೀರಿ ಹೋಗಿದೆ ಇನ್ಯಾವಾಗ ಮದುವೆ ಎಂದು ಪೋಷಕರು ಪ್ರಶ್ನೆ ಕೇಳಿದ್ದು, ಈ ಬಗ್ಗೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಅನ್ನು Ks_NotANiceGirl  ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಯುವತಿಯು “ಭಾರತದಲ್ಲಿ ಅವಿವಾಹಿತ ಯುವತಿಯರಿಗೆ ಒಂದು ಹಂತದ ನಂತರ ಅವರ  ಹುಟ್ಟು ಹಬ್ಬದ  ದಿನವೂ  ಶೋಕ ದಿನದಂತಿರುತ್ತದೆ. ಹೌದು ಇಂದು ನನ್ನ ಜನ್ಮ ದಿನ, ಈ ದಿನವೇ ನನ್ನ ಹೆತ್ತವರು Expiry Date ಮುಗಿದು ಹೋಗಿದೆ, ಇನ್ಯಾವಾಗ ಮದುವೆ ಎಂದು ಕೇಳಿದ್ದಾರೆ. ಜೊತೆಗೆ ವಯಸ್ಸು ಮೀರಿದರೂ  ಮದುವೆಯಾಗದೆ ಅವರ ಜೀವನವನ್ನು ಹೇಗೆ ನಾಶಪಡಿಸಿದೆ ಹಾಗೂ ನನ್ನ ಕಾರಣದಿಂದಾಗಿ ಅವರು ಈ ಸಮಾಜದ ಚುಚ್ಚು ಮಾತುಗಳನ್ನು ಹೇಗೆ ಕೇಳಿದರು ಎಂಬುದನ್ನು ಕೂಡಾ ನನಗೆ ಹೇಳಿದರು” ಎಂಬ ಸುದೀರ್ಘ ಬರಹವನ್ನು  ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಈ ದೇವಾಲಯದಲ್ಲಿ 1 ನಿಂಬೆ ಹಣ್ಣನ್ನು ಹರಾಜಿನ ಮೂಲಕ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ; ಯಾಕಿಷ್ಟು ದುಬಾರಿ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ;

ಮಾರ್ಚ್ 25 ರಂದು ಹಂಚಿಕೊಂಡ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸಲು ಈ ರೀತಿ ಮಾತನಾಡಲು ನಿಮ್ಮ ಹೆತ್ತವರಿಗೆ ಯಾವುದೇ ಹಕ್ಕಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು  ʼಈ ಪೋಷಕರು ತಮ್ಮ ಮಕ್ಕಳ ಸಂತೋಷಕ್ಕಿಂತ ತಮ್ಮ ನೆರೆ ಹೊರೆಯವರ ಅಭಿಪ್ರಾಯಗಳ  ಬಗ್ಗೆ ಏಕೆ ಹೆಚ್ಚು ಯೋಚನೆ ಮಾಡುತ್ತಾರೆ ಅಂತಾನೇ ಗೊತ್ತಾಗಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬ  ಬಳಕೆದಾರರು ʼಇಂತಹ ಪೋಷಕರ ಬದಲು ಅನಾಥರಾಗಿರುವುದು ಉತ್ತಮʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮದುವೆಗೆ ಒತ್ತಾಯ ಮಾಡುವ ಪೋಷಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ