ಸಾಮಾಜಿಕ ಮಾಧ್ಯಮಗಳ ಬಗ್ಗೆ ಹೆಚ್ಚುತ್ತಿರುವ ಕ್ರೇಜ್ ನಡುವೆ ಯಾವಾಗ ಏನು ವೈರಲ್ ಆಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವೊಮ್ಮೆ ಇದು ಪ್ರಯೋಜನಕಾರಿಯಾಗಿದೆ, ಆದರೆ ಕೆಲವೊಮ್ಮೆ ಇದು ಅನಾನುಕೂಲವಾಗಿದೆ. ಸಾಮಾನ್ಯವಾಗಿ ಕೆಲವು ಜನರು ಒಂದು ಫೋಟೋ ಮತ್ತು ವಿಡಿಯೋಗಳನ್ನು ನಿಜವೆಂದು ಪರಿಗಣಿಸಿ ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಅಂತಹ ಒಂದು ವಿಡಿಯೋ ಮತ್ತು ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಪಾಕಿಸ್ತಾನದಲ್ಲಿ ವಾಸಿಸುವ ತಾಯಿ ಮತ್ತು ಮಗನದ್ದು.
ಮಧ್ಯವಯಸ್ಕ ಮಹಿಳೆ ಮತ್ತು ಚಿಕ್ಕ ಹುಡುಗನ ಫೋಟೋವನ್ನು ಹಂಚಿಕೊಳ್ಳುವಾಗ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಕಿಸ್ತಾನದ ತಾಯಿ ಮತ್ತು ಮಗ ಪರಸ್ಪರ ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆಲವರು ಈ ಫೋಟೋದ ಜೊತೆಗೆ ಮತ್ತೊಂದು ಚಿತ್ರವನ್ನು ಸಹ ಹಂಚಿಕೊಳ್ಳುತ್ತಿದ್ದಾರೆ, ಇದರಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಇವರೇ ಈಗ ಗಂಡ ಮತ್ತು ಹೆಂಡತಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ.
ಫೆಸ್ಬುಕ್ ಬಳಕೆದಾರರೊಬ್ಬರು ಮೂರು ಫೋಟೋವನ್ನು ಹಂಚಿಕೊಂಡು, ‘‘ಪಾಕಿಸ್ತಾನದಲ್ಲಿ ತಂದೆ ತಲಾಕ್ ನೀಡಿದ ಮೇಲೆ 18ವರ್ಷದಿಂದ ಮಗನನ್ನು ಬೆಳೆಸಿದ ತಾಯಿಯನ್ನೇ ಮದುವೆ ಮಾಡಿ ಕೊಂಡ ಅಬ್ದುಲ್ ಅಹಾದ್. ಪಾಕಿಸ್ತಾನ ಮಾಧ್ಯಮಗಳು ಇದನ್ನು ಹೃದಯಸ್ಪರ್ಶಿ ಘಟನೆ ಎಂದು ವರದಿ ಮಾಡಿದೆ. ಜಗತ್ತಿನಲ್ಲಿ ಬೆರ್ಯಾವ ಧ* ದಲ್ಲೂ ಇದು ಸಾಧ್ಯವಿಲ್ಲ….’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋಗಳು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಚಿತ್ರದಲ್ಲಿ ಕಾಣುತ್ತಿರುವ ಯುವಕ ಪಾಕಿಸ್ತಾನದಲ್ಲಿ ನೆಲೆಸಿರುವ ಅಬ್ದುಲ್ ಅಹದ್. ಆತ ತನ್ನ ತಾಯಿಗೆ ಎರಡನೇ ಮದುವೆ ಮಾಡಲು ವ್ಯವಸ್ಥೆ ಮಾಡಿದ್ದ. ತನ್ನ ಸ್ವಂತ ತಾಯಿಯನ್ನು ಮದುವೆಯಾಗುವ ಹೇಳಿಕೆ ಸಂಪೂರ್ಣವಾಗಿ ತಪ್ಪಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಸ್ವತಃ ಟಿವಿ9 ಕನ್ನಡ ಈ ಘಟನೆಯ ನೈಜ್ಯತೆ ಕುರಿತು ವರದಿ ಮಾಡಿರುವುದು ಕಂಡುಬಂದಿದೆ. ಡಿಸೆಂಬರ್ 31, 2024 ರಂದು ಪ್ರಕಟವಾಗಿರುವ ಈ ಸುದ್ದಿಗೆ ‘‘ಒಂಟಿಯಾಗಿದ್ದ ತಾಯಿಗೆ ಎರಡನೇ ಮದುವೆ ಮಾಡಿಸಿದ ಮಗ; ಭಾವನಾತ್ಮಕ ವಿಡಿಯೋ ವೈರಲ್’’ ಎಂಬ ಶೀರ್ಷಿಕೆ ನೀಡಲಾಗಿದೆ.
ವರದಿಯ ಪ್ರಕಾರ, ‘‘ಪಾಕಿಸ್ತಾನದ ಯುವಕ ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ’’ ಎಂದು ಬರೆಯಲಾಗಿದೆ.
Viral: ಒಂಟಿಯಾಗಿದ್ದ ತಾಯಿಗೆ ಎರಡನೇ ಮದುವೆ ಮಾಡಿಸಿದ ಮಗ; ಭಾವನಾತ್ಮಕ ವಿಡಿಯೋ ವೈರಲ್
ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಹದ್ ತಾನೇ ಮುಂದೆ ನಿಂತು ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಪಾಕಿಸ್ತಾನದ ಸ್ಥಳೀಯ ಸುದ್ದಿ ಮಾಧ್ಯಮ BOL News ಕೂಡ ತನ್ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಈ ಘಟನೆಯ ಕುರಿತು ಮಾಡಿರುವ ವಿಡಿಯೋ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಡಿಸೆಂಬರ್ 30, 2024 ರಂದು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ‘‘ಅಬ್ದುಲ್ ಅವರ ತಾಯಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಮಗಳು ಮತ್ತು ಮಗ ಹುಟ್ಟಿದ ನಂತರ ಪತಿ ನಿಧನರಾದರು. ಅಂದಿನಿಂದ, ಮಕ್ಕಳನ್ನು ತಾಯಿ ಮತ್ತು ತಂದೆಯಾಗಿ ತಾವೇ ಬೆಳೆಸಿದರು. ಎಷ್ಟೇ ಆರ್ಥಿಕ ಸಂಕಷ್ಟವಿದ್ದರೂ ಕೊರತೆ ಕಾಣದಂತೆ ಮಕ್ಕಳನ್ನು ಬೆಳೆಸಿದರು. ಅಮ್ಮನ ಕಷ್ಟ ನೋಡಿಕೊಂಡು ಬೆಳೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ಉದ್ಯೋಗದೊಂದಿಗೆ ಜೀವನದಲ್ಲಿ ನೆಲೆಯೂರಿದ್ದಾರೆ. ಆದರೆ ತನಗಾಗಿ ನಿಸ್ವಾರ್ಥವಾಗಿ ಬದುಕಿದ ತಮ್ಮ ತಾಯಿಗೆ ತನ್ನ ಜೀವನದಲ್ಲಿ ಮತ್ತೆ ಪ್ರೀತಿ ಪಡೆಯುವ ಹಕ್ಕಿದೆ ಎಂದು ಅಬ್ದುಲ್ ತನ್ನ ತಾಯಿಗೆ ಮದುವೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಹಿರಿಯರ ಸಮ್ಮುಖದಲ್ಲಿ ಎರಡನೇ ಮದುವೆ ಮಾಡಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದಲ್ಲಿ ಮಗ ತನ್ನ ತಾಯಿಯನ್ನು ಮದುವೆಯಾಗಿದ್ದಾನೆ ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:01 am, Thu, 2 January 25