Viral: ಒಂಟಿತನ ಕಾಡುತ್ತಿದೆಯೇ? ‘ಬಾಡಿಗೆ ಗೆಳತಿ’ಯನ್ನು ನೇಮಿಸಿಕೊಳ್ಳಿ!
Rent a Girlfriend : ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ಈ ಪರಿಕಲ್ಪನೆ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ಆದರೆ ಬಾಡಿಗೆ ಗೆಳತಿಯನ್ನು ಪಡೆಯಬೇಕೆಂದರೆ ಎಷ್ಟು ಹಣ ಪಾವತಿಸಬೇಕು, ನಿಯಮಗಳೇನು? ಓದಿ.
Japan : ಹಣದಿಂದ ಪ್ರೀತಿಯನ್ನು ಖರೀದಿಸಲಾಗದು ಆದರೆ ಜಪಾನ್ನಲ್ಲಿ ಇದು ಸಾಧ್ಯವಿದೆ! ಅಚ್ಚರಿಯಾಗುತ್ತಿದೆಯಾ? ಹೌದು, ಒಂಟಿತನ ಕಾಡುತ್ತಿದ್ದರೆ ಇಲ್ಲಿ ಸಿಮ್ಯುಲೇಟೆಡ್ ರೊಮ್ಯಾನ್ಸ್ಗಾಗಿ (Simulated Romance) ಬಾಡಿಗೆ ಗೆಳತಿ ಸಿಗುತ್ತಾಳೆ. ಜಪಾನ್ ಟುಡೇ ಇದನ್ನು ವರದಿ ಮಾಡಿದೆ. ಜಪಾನ್ನಲ್ಲಿ ಇದು ಕಾನೂನುಬದ್ಧವಾಗಿದ್ದು ಇದಕ್ಕೆ ಸಂಬಂಧಿಸಿದ ವೆಬ್ಸೈಟ್ಗಳನ್ನು ಸರ್ಕಾರವು ಮಾನ್ಯ ಮಾಡಿದೆ. ಇಷ್ಟೇ ಅಲ್ಲ, ಈ ವೆಬ್ಸೈಟ್ಗಳ ಮೂಲಕ ಕುಟುಂಬ ಸದಸ್ಯರನ್ನೂ ನೀವು ಬಾಡಿಗೆಗೆ ನೇಮಿಸಿಕೊಳ್ಳಬಹುದಾಗಿದೆ. ಅನೇಕರು ಅವಿವಾಹಿತರಾಗಿ ಮತ್ತು ಒಂಟಿಯಾಗಿ ಉಳಿದಿರುವ ಕಾರಣಕ್ಕೆ ಈ ಪರಿಕಲ್ಪನೆ ಇಲ್ಲಿ ಮುನ್ನೆಲೆಗೆ ಬಂದಿದೆ.
ಏಷಿಯನ್ ಬಾಸ್ (Asian Boss) ಎಂಬ ಯೂಟ್ಯೂಬ್ ಚಾನೆಲ್, ಶಿಹೋಮಿ ಎಂಬ ಬಾಡಿಗೆ ಗೆಳತಿಯನ್ನು ಸಂದರ್ಶಿಸಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದೆ. ‘ಈತನಕ ತಮ್ಮ ಬದುಕಿನಲ್ಲಿ ಗೆಳತಿಯರನ್ನೇ ಪಡೆಯದ, ಹುಡುಗಿಯರಿಂದ ದೂರವಿರುವ ಮತ್ತು ನಿಜವಾದ ಸಂಗಾತಿಯನ್ನು ಹೊಂದುವಲ್ಲಿ ವಿಫಲರಾದವರು ಬಾಡಿಗೆ ಗೆಳತಿಯನ್ನು ನಿರೀಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಈ ಮೂಲಕ ಮೋಸ ಮಾಡುವವರೂ ಇರುತ್ತಾರೆ’ ಎಂದಿದ್ದಾಳೆ ಆಕೆ.
ಇದನ್ನೂ ಓದಿ : Viral Video: ಶ್ರೀಮಂತರು ಷೋಕಿಗಾಗಿ ನಾಯಿ ಸಾಕುತ್ತಾರೆ, ಅವರು ಪ್ರೀತಿಸುವುದಿಲ್ಲ; ನೆಟ್ಟಿಗರ ಚರ್ಚೆ
ಒಬ್ಬಂಟಿಗರಿಗೆ ಇದು ಹೇಳಿಮಾಡಿಸಿದಂತಿದೆ ನಿಜ, ಆದರೆ ವಾಸ್ತವದಲ್ಲಿ ಇದು ದುಬಾರಿಯಾಗಿದೆ. ಎರಡು ಗಂಟೆಗಳಿಗಾಗಿ ಮೊದಲ ಸಲ ಕನಿಷ್ಟ ರೂ. 3,000ಯನ್ನು ಬಾಡಿಗೆ ಗೆಳತಿಗೆ ಸಂದಾಯ ಮಾಡಬೇಕು. ನಂತರ ಭೇಟಿಗಾಗಿ ಹೆಚ್ಚುವರಿಯಾಗಿ ರೂ. 1,200 ಪಾವತಿಸಬೇಕಾಗುತ್ತದೆ. ಆದರೆ ಬಾಡಿಗೆ ಸೇವೆಯನ್ನು ಪಡೆಯುವವರು ಕಂಪೆನಿಯು ನಿಗದಿ ಪಡಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಗ್ರಾಹಕರು ನೇರವಾಗಿ ಬಾಡಿಗೆ ಗೆಳತಿಯನ್ನು ಸಂಪರ್ಕಿಸುವ ಹಾಗಿಲ್ಲ. ಹಾಗೆಯೇ ಆಕೆಗೆ ಉಡುಗೊರೆಗಳನ್ನು ನೀಡುವಹಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಮತ್ತು ಆಕೆಯ ವೃತ್ತಿಪರತೆಯನ್ನು ಗೌರವಿಸಬೇಕು.
ಇದನ್ನೂ ಓದಿ : Viral: ದರೋಡೆಕೋರ ಮೀನು; ಸಮುದ್ರದಾಳದಲ್ಲಿಯೂ ಕಳ್ಳರಿದ್ದಾರೆ ಎಚ್ಚರಿಕೆ!
ನಾಗರಿಕತೆ ಬೆಳೆದಂತೆಲ್ಲ ಸ್ವಕೇಂದ್ರಿತ ಬದುಕು ಆಳಕ್ಕಿಳಿಯುತ್ತಿದೆ. ಇಳಿಯುತ್ತ ವಿಚಿತ್ರ ಕವಲುಗಳನ್ನು ಸೃಷ್ಟಿಸುತ್ತಿದೆ. ಕುಟುಂಬ ಎನ್ನುವ ಪರಿಕಲ್ಪನೆ ಅಷ್ಟಷ್ಟೇ ಸವೆಯುತ್ತಿದೆ. ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಎನ್ನುವುದು ಲಿವ್ ಇನ್ನ ಹೊಸ್ತಿಲನ್ನೂ ದಾಟಿ ಬಾಡಿಗೆಗೆ ಗೆಳತಿ ಎಂಬ ಪರಿಕಲ್ಪನೆಗೆ ಬಂದು ನಿಂತಿದೆ. ಏನೇ ಆದರೂ ಜೀವಕ್ಕೊಂದು ಸಾಂಗತ್ಯ ಬೇಕೇಬೇಕು. ಆದರೆ ಪರಿಕಲ್ಪನೆಗಳ ಸ್ವರೂಪ ಮಾತ್ರ ಭಿನ್ನ. ಬಾಡಿಗೆ ಗೆಳೆಯ, ಬಾಡಿಗೆ ಅಮ್ಮ, ಬಾಡಿಗೆ ಅಪ್ಪ, ಬಾಡಿಗೆ ಅಣ್ಣ, ಬಾಡಿಗೆ ಅಜ್ಜ, ಬಾಡಿಗೆ ಅಜ್ಜಿ ಇನ್ನೂ ಏನೇನೋ, ಮತ್ತಿನ್ನೇನೋ …!?
ಈ ಕುರಿತು ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:45 pm, Sat, 15 July 23