Viral Video : ಇಂಟರ್ನೆಟ್ನಲ್ಲಿರುವ ಪಾಕಪ್ರವೀಣ/ಣೆಯರ ಪ್ರಯೋಗಕ್ಕೆ ಸಿಲುಕಿದ ನಮ್ಮ ದೋಸೆ ಆಗಾಗ ಹೀಗೆ ನರಳುತ್ತಿರುತ್ತದೆ. ಅದರಲ್ಲೂ ಉತ್ತರ ಭಾರತದ ಖಾದ್ಯಗಳನ್ನು ದೋಸೆಯ ಹೊಟ್ಟೆಯಲ್ಲಿಟ್ಟು ಬೇಯಿಸಿ, ಕತ್ತರಿಸುವ ರೀತಿ ಇದೆಯಲ್ಲ! ಮಾಡಿದವರಿಗೇ ಪ್ರಿಯ. ಇದೀಗ ವೈರಲ್ ಆಗುತ್ತಿರುವ ಈ ಕೋರಿಯನ್ ದೋಸೆ ಎಂಬ ಹೊಸ ಪ್ರಯೋಗದ ವಿಡಿಯೋ ಭಾರೀ ಓಡಾಡುತ್ತಿದೆ. ಫುಡ್ ಬ್ಲಾಗರ್ ಒಬ್ಬರು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡು ಬ್ಲಾಗರ್ ಅನ್ನು ಕಾವಲಿ ಮೇಲೆ ಸರೀ ಹುರಿಯುತ್ತಿದ್ದಾರೆ!
ಶೆಝ್ವಾನ್ ದೋಸಾ, ಚಿಲ್ಲಿ ಪನೀರ್ ದೋಸಾ, ಆಲೂ ಚೀಸ್ ದೋಸಾ, ವೆಜಿಟೇಬಲ್ ಚೀಸ್ ದೋಸಾ, ಪನೀರ್ ಮಟರ್ ದೋಸಾ, ಚಾಕೋಲೇಟ್ ದೋಸಾ ಹೀಗೆ ಏನೇನೆಲ್ಲವನ್ನೂ ದೋಸೆಯೆಂಬ ಸರಳ ಸಾದಾ ರುಚಿಯೋತ್ತಮನ ಹೊಟ್ಟೆಯೊಳಗಿಟ್ಟು ಅಸ್ತಿತ್ವ ನಾಶ ಮಾಡುವುದಿನ್ನೂ ಚಾಲ್ತಿಯಲ್ಲಿದೆ ಎನ್ನುವುದಕ್ಕೆ ಈ ನೂಡಲ್ಸ್ ಚೀಝ್ ದೋಸಾ ಸಾಕ್ಷಿ. ಇದಕ್ಕೆ ಕೋರಿಯನ್ ದೋಸಾ ಎಂಬ ಕಿರೀಟ ಬೇರೆ!
@soosaute ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ಅಂಜಲಿ ಧಿಂಗ್ರಾ ಎಂಬ ಫುಡ್ ಬ್ಲಾಗರ್ ನಿರ್ವಹಿಸುತ್ತಾರೆ. ಅಂಜಲಿಯವರೇ ತಯಾರಿಸಿದ ಕೋರಿಯನ್ ದೋಸೆ ಇದಾಗಿದೆ. 1,51,000 ಜನರು ಈ ವಿಡಿಯೋ ನೋಡಿದ್ದಾರೆ. 9000ಕ್ಕಿಂತಲೂ ಹೆಚ್ಚು ಜನ ಈ ಪೋಸ್ಟ್ ಇಷ್ಟಪಟ್ಟಿದ್ದಾರೇನೋ ನಿಜ. ಆದರೆ ಸಾಕಷ್ಟು ಜನ ಈ ಪ್ರಯೋಗವನ್ನು ಖಂಡಿಸಿದ್ದಾರೆ. ‘ನೀವು ಹೀಗೆಲ್ಲ ಪ್ರಯೋಗ ಮಾಡುವುದನ್ನು ನಿಲ್ಲಿಸಿ’ ಎಂದಿದ್ದಾರೆ ಒಬ್ಬರು. ‘ಈ ವಿಡಿಯೋ ಡಿಲೀಟ್ ಮಾಡಲು ಇನ್ನೂ ಸಮಯವಿದೆ! ಬೇಡ ಇಂಥ ದೋಸೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಹೀಗೆ ಈಕೆ ಪ್ರಯೋಗ ಮಾಡುವುದನ್ನು ನಿಲ್ಲಿಸಲು ಯಾರಾದರೂ ಹೇಳಿ, ದಕ್ಷಿಣಭಾರತೀಯನಾದ ನನಗೆ ಇದನ್ನು ನೋಡಲು ಬಹಳ ನೋವೆನ್ನಿಸುತ್ತಿದೆ. ಯಾಕೆ ಹೀಗೆ ದೋಸೆಯ ಮೇಲೆ ನೂಡಲ್ಸ್ ಸುರಿಯುತ್ತಿದ್ದಾಳೆ? ಈಕೆಯನ್ನು ಇನ್ಸ್ಟಾಗ್ರಾಂನಿಂದಲೇ ಓಡಿಸಿ’ ಎಂದಿದ್ದಾರೆ. ‘ಈ ಹುಡುಗಿಗೆ ಏನು ಸಮಸ್ಯೆಯಾಗಿದೆ’ ಎಂದು ಮತ್ತೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.
ಸಾಕಲ್ವಾ ದೋಸೆಯ ಕೊಲೆ ಮಾಡಿದ್ದು ಈಕೆ? ಇಂಥ ಭೀಕರಪಾಕಪ್ರಯೋಗದ ಸಂತತಿಗೆ ಧಿಕ್ಕಾರ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:06 pm, Tue, 18 October 22