Go Corona Video: ಕೊರೊನಾ ಕೊರೊನಾ ಭಾಗ್; ಈತನ ಮಂತ್ರ ಕೇಳಿಯೇ ಕೊರೊನಾ ಓಡಿಹೋಗಬಹುದು! ವಿಡಿಯೋ ನೋಡಿ
Go Corona Viral Video: ಇತ್ತೀಚೆಗೆ ಕೊರೊನಾ ವಿರುದ್ಧ ಹೋರಾಡಲು ಕೊರೊನಾ ದೇವತೆ, ಕೊರೊನಾ ಮಾರಮ್ಮ ಇತ್ಯಾದಿ ವಿಚಾರಗಳು ವೈರಲ್ ಆಗಿದ್ದವು. ಕಳೆದ ಬಾರಿ ರಾಜಕೀಯ ಮುಖಂಡರು ಗೋ ಕೊರೊನಾ ಗೋ ಎಂದು ಕ್ಯಾಂಡಲ್ ಹಿಡಿದು ಘೋಷಣೆ ಕೂಗಿದ್ದರು.
ಭಾರತದಲ್ಲಿ ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದೆ. ಬಹಳಷ್ಟು ಮಂದಿ ಕೊವಿಡ್-19ಗೆ ತುತ್ತಾಗುತ್ತಿದ್ದಾರೆ. ಎದುರಾದ ಸಂಕಷ್ಟ ಹಾಗೂ ಸಾವು ನೋವುಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜನರು ಕೊರೊನಾದಿಂದ ಮುಕ್ತಿ ಹೊಂದಲು ಹಲವು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ವೈದ್ಯಕೀಯ ಪದ್ಧತಿಯ ಜೊತೆಗೆ ವಿವಿಧ ದೇವರ, ಹೋಮ, ಹವನಗಳ ಮೊರೆ ಹೋಗುತ್ತಿದ್ದಾರೆ. ಕೆಲವು ಪ್ರಯೋಗಗಳು ಧಾರ್ಮಿಕ ಹಿನ್ನೆಲೆಯಲ್ಲಿ ಸರಿಯೇ ಆಗಿದ್ದರೂ ಕೆಲವಷ್ಟು ಕೆಲಸಗಳು ಮೂಢತೆಯ ಪರಮಾವಧಿ ಎಂದು ಅನಿಸಲ್ಪಡುತ್ತದೆ. ಜನರಿಂದ ತಮಾಷೆಗೆ ಒಳಗಾಗಿಬಿಡುತ್ತದೆ. ಅಂತಹುದೇ ಒಂದು ಸನ್ನಿವೇಶ ಇಲ್ಲಿ ನಡೆದಿದೆ.
ಇತ್ತೀಚೆಗೆ ಕೊರೊನಾ ವಿರುದ್ಧ ಹೋರಾಡಲು ಕೊರೊನಾ ದೇವತೆ, ಕೊರೊನಾ ಮಾರಮ್ಮ ಇತ್ಯಾದಿ ವಿಚಾರಗಳು ವೈರಲ್ ಆಗಿದ್ದವು. ಕಳೆದ ಬಾರಿ ರಾಜಕೀಯ ಮುಖಂಡರು ಗೋ ಕೊರೊನಾ ಗೋ ಎಂದು ಕ್ಯಾಂಡಲ್ ಹಿಡಿದು ಘೋಷಣೆ ಕೂಗಿದ್ದರು. ಆ ಬಳಿಕ, ಪ್ರಧಾನಿ ಮೋದಿ ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳಿದ್ದು ಕೂಡ ತಪ್ಪಾಗಿ ಕಾರ್ಯರೂಪಕ್ಕೆ ಬಂದು ಟ್ರೋಲ್ಗೆ ಒಳಗಾಗಿತ್ತು.
ಈ ಘಟನಾವಳಿಗಳಿಗೆ ಈಗ ಹೊಸತೊಂದು ವಿಡಿಯೋ ಸೇರ್ಪಡೆಯಾಗಿದೆ. ಬಾಲಿವುಡ್ ಛಾಯಾಗ್ರಾಹಕ ವರೀಂದ್ರ ಚಾವ್ಲಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಂಡುಬಂದಿರುವಂತೆ, ಒಬ್ಬರು ಕೊರೊನಾ ನಿರ್ಮೂಲನೆಗಾಗಿ ಯಜ್ಞ ಮಾಡುತ್ತಿದ್ದಾರೆ. ಓಂ ಕೊರೊನಾ ಭಾಗ್ ಸ್ವಾಹಾ ಎಂದು ಮಂತ್ರ ಹೇಳುತ್ತಾ ಅಗ್ನಿಗೆ ಹವಿಸ್ಸನ್ನು ಅರ್ಪಣೆ ಮಾಡುತ್ತಿದ್ದಾರೆ. ಕೊರೊನಾ ತೊಲಗಿಸಲು ಕೈಗೊಂಡ ಈ ಕ್ರಮ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.
View this post on Instagram
ಕೊರೊನಾ ಕೊರೊನಾ ಎಂದು ನಾಲ್ಕಾರು ಬಾರಿ ಹೇಳಿ, ಭಾಗ್ (ತೊಲಗು) ಎಂದು ಹೋಮ ಮಾಡುವಾತ ಅಬ್ಬರಿಸುತ್ತಿದ್ದಾನೆ. ಇದನ್ನು ನೋಡಿದವರೆಲ್ಲಾ ಆತನ ಧ್ವನಿಗೇ ಕೊರೊನಾ ಓಡಿ ಹೋಗಬಹುದು ಎಂದು ಕಮೆಂಟ್ ಮಾಡಿದ್ದಾರೆ. ಏನೇ ಆದರೂ ಭಾರತೀಯರು ತಮ್ಮದೇ ಶೈಲಿಯಲ್ಲಿ ಕೊರೊನಾ ಓಡಿಸುವ ಪ್ರಯತ್ನ ಮಾಡೋದು ಬಿಡುವುದಿಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಆಯುರ್ವೇದದಲ್ಲಿ ಚಿಕಿತ್ಸೆ; 10 ಸಾವಿರದಷ್ಟು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಕೊರೊನಾದಿಂದ ಪತಿಯ ಸಾವು; ಮನನೊಂದ 3 ತಿಂಗಳ ಗರ್ಭಿಣಿ ಪತ್ನಿ ನೇಣಿಗೆ ಶರಣು
Published On - 8:23 pm, Fri, 21 May 21