ವಧುವಿನ ‘ವಿಶೇಷ’ ವಿದ್ಯಾರ್ಥಿಗಳನ್ನು ಮದುವೆಗೆ ಆಹ್ವಾನಿಸಿ ಅಚ್ಚರಿ ನೀಡಿದ ವರ
Down Syndrome : ‘ಭ್ರಮೆಗೆ ತಳ್ಳುವ ತಂತ್ರವಿದು, ಖಂಡಿತ ಈಕೆಯನ್ನು ಮೋಸಗೊಳಿಸುತ್ತಿದ್ದಾನೆ’ ಎಂದೊಬ್ಬರು, ‘ಜಗತ್ತಿನಲ್ಲಿ ಇನ್ನೂ ಒಳ್ಳೆಯತನವಿದೆ, ನೀವು ಯಾವುದರಿಂದ ಆವರಿಸುತ್ತೀರೋ ಅದನ್ನೇ ಉಸಿರಾಡುತ್ತೀರಿ’ ಎಂದು ಇನ್ನೊಬ್ಬರು.
Viral Video : ನಾನು ನಿನ್ನನ್ನು ಪ್ರೀತಿಸುತ್ತೇನೆ. ಈ ಮೂರು ಪದಗಳಲ್ಲಿ ಏನೆಲ್ಲ ಅಡಗಿದೆ?; ನಿನ್ನನ್ನು, ನಿನ್ನ ಆಸಕ್ತಿಗಳನ್ನು, ನಿನ್ನ ಅಭಿರುಚಿಯನ್ನು, ನಿನ್ನ ವೃತ್ತಿಯನ್ನು, ನಿನ್ನ ಸ್ವಂತಿಕೆಯನ್ನು, ನಿನ್ನ ಆಶಯವನ್ನು ಮತ್ತು ನಿನ್ನವರೆನ್ನುವ, ನಿನ್ನದೆನ್ನುವ ಎಲ್ಲವನ್ನೂ ಪ್ರೀತಿಸುತ್ತೇನೆ ಜೊತೆಗೆ ಪ್ರೋತ್ಸಾಹಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದರ್ಥ ಅಲ್ಲವೆ? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ತನ್ನ ಭಾವೀಪತ್ನಿಗೆ ಅಚ್ಚರಿ ಮೂಡಿಸಲು ವರ ಹೀಗೊಂದು ಹೃದಯಸ್ಪರ್ಶಿ ಸನ್ನಿವೇಶವನ್ನು ಮದುವೆ ಸಂದರ್ಭದಲ್ಲಿ ಸೃಷ್ಟಿಸಿದ್ದಾನೆ. ಆಕೆ ಕೆಲಸ ಮಾಡುವ ಶಾಲೆಯ ವಿಶೇಷ ಮಕ್ಕಳನ್ನೆಲ್ಲ ಮದುವೆಗೆ ಆಹ್ವಾನಿಸಿ ಆಕೆಯಲ್ಲಿ ಅಚ್ಚರಿ ಮೂಡಿಸಿದ್ದಾನೆ.
The Groom gave the task of carrying rings to the Bride’s students with down syndrome. How beautiful… pic.twitter.com/rVt26pRz7J
— The Figen (@TheFigen_) October 25, 2022
ದಿ ಫಿಗೆನ್ ಎಂಬ ಟ್ವಿಟರ್ ಅಕೌಂಟಿನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮದುವೆಯ ಮುಖ್ಯಘಟ್ಟಕ್ಕೆ ಬಂದಾಗ ವಧು ಭಾವುಕಳಾಗುತ್ತಾಳೆ. ಬಿಳೀ ಉಡುಗೆಯಲ್ಲಿ ವಿಶೇಷ ಮಕ್ಕಳೆಲ್ಲ ಸಾಲಾಗಿ ಮದುವೆ ಮಂಟಪದತ್ತ ನಡೆದುಬರುತ್ತಿದ್ದಂತೆ ಆಕೆಯ ಕಣ್ಣುಗಳು ಖುಷಿಯಿಂದ ತುಳುಕುತ್ತವೆ. ಈ ವಿಶೇಷ ಮಕ್ಕಳು ಇವರಿಬ್ಬರಿಗಾಗಿ ಉಂಗುರಗಳು ಹೂಗಳನ್ನು ಹಿಡಿದುಕೊಂಡು ಬರುತ್ತಾರೆ. ಹೀಗೊಂದು ಆಪ್ತ ಸನ್ನಿವೇಶವನ್ನು ಸೃಷ್ಟಿಸಿದ್ದಕ್ಕೆ ಆಕೆಗೆ ಭಾವೀಪತಿಯ ಮೇಲೆ ಮತ್ತಷ್ಟು ಪ್ರೀತಿಯುಕ್ಕುತ್ತದೆ.
ಈತನಕ 2.4 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಆದರೆ ನೆಟ್ಟಿಗರು ಈ ವಿಡಿಯೋ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಖಂಡಿತ ಈತ ಆಕೆಯನ್ನು ಮೋಸಗೊಳಿಸುತ್ತಿದ್ದಾನೆ, ಭ್ರಮೆಗೆ ತಳ್ಳುವ ತಂತ್ರವಿದು ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಇನ್ನೂ ಒಳ್ಳೆಯತನವಿದೆ, ನೀವು ಯಾವುದರಿಂದ ಸುತ್ತುವರೆದಿರುತ್ತೀರೋ ಅದನ್ನೇ ಉಸಿರಾಡುತ್ತೀರಿ ಎಂದಿದ್ದಾರೆ ಮತ್ತೊಬ್ಬರು. ಇವೆಲ್ಲ ರೀಲಿಗಾಗಿ ಕ್ಯಾಮೆರಾ ಮುಂದೆ ಮಾಡುವ ಉಪಾಯಗಳು, ನಿತ್ಯಜೀವನದಲ್ಲಿ ಇದನ್ನು ಮಾಡಲಿ ಎಂದಿದ್ದಾರೆ ಮಗದೊಬ್ಬರು.
ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:41 pm, Wed, 26 October 22