ನಮ್ಮ ಕಿವಿಗಳು ನಾದತರಂಗಗಳಿಂದ ಸಂಸ್ಕಾರಗೊಂಡಂಥವು. ಹುಟ್ಟಿನಿಂದ ಚಟ್ಟದವರೆಗೂ ಶಬ್ದವು ನಮ್ಮನ್ನು ಅನೇಕ ರೀತಿಯಲ್ಲಿ ಸಂಚಲನಕ್ಕೀಡು ಮಾಡುತ್ತದೆ. ಸ್ತಂಭೀಭೂತರನ್ನಾಗಿಸುತ್ತದೆ. ಈ ವಿಡಿಯೋವನ್ನು ಗಮನಿಸಿ, ಇದರಲ್ಲಿ ಭಾವಪರವಶರಾಗಿ ವ್ಯಕ್ತಿಯೊಬ್ಬರು ಢೋಲು ನುಡಿಸುತ್ತಿದ್ದಾರೆ. ಭಾರತದ ಬಹುಮುಖಿ ಸಂಸ್ಕೃತಿಗೆ ಮಾರುಹೋಗದವರು ಯಾರಿದ್ದಾರೆ? ಅಂತೆಯೇ ಭಾರತೀಯರೊಬ್ಬರು ಢೋಲು ನುಡಿಸುತ್ತಿರುವ ವಿಡಿಯೋವನ್ನು ಕೆನಡಿಯನ್ ಗಾಯಕ ಜಸ್ಟಿನ್ ಬೈಬರ್ (Justin Bieber) ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ. ‘ಮಾತಾ ಕಾ ಜಾಗ್ರತ್’ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಢೋಲು ನುಡಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಜಸ್ಟಿನ್, ತನ್ನ ಸ್ನೇಹಿತ ಡ್ರಮ್ ಕಲಾವಿದ ಡೆವೊನ್ ಟೇಲರ್ ಹಂಚಿಕೊಂಡ ಪೋಸ್ಟ್ನಲ್ಲಿ ನೋಡಿ ಅಚ್ಚರಿಗೊಂಡಿದ್ದಾರೆ. ಈ ವ್ಯಕ್ತಿ ತನ್ಮಯನಾಗಿ ಡೋಲು ನುಡಿಸುತ್ತಿದ್ದರೆ ಉಳಿದವರು ಪ್ರಾರ್ಥನೆಯಲ್ಲಿ ಮುಳುಗಿದ್ದಾರೆ.
ವಿಡಿಯೋದಲ್ಲಿ ಅಲಂಕರಿಸಿದ ತಾಯಿ ದುರ್ಗೆ, ಹನುಮಂತನ ಮೂರ್ತಿಗಳನ್ನು ಕಾಣಬಹುದು. ಅಲ್ಲಿರುವ ಜನರು ಢೋಲು ನುಡಿಸುತ್ತಿರುವವರ ಶಕ್ತಿ ಮತ್ತು ಉತ್ಸಾಹದಿಂದ ಮೂಕವಿಸ್ಮಿತರಾಗಿ ಪ್ರಾರ್ಥನೆಯಲ್ಲಿ ಮುಳುಗಿರುವುದನ್ನು ಕಾಣಬಹುದು. ಈ ವಿಡಿಯೋ ರಂಗೀಲೆ ಹರ್ಯಾನ್ವಿ ಎಂಬ ಪೇಜ್ನಲ್ಲಿ ಕಂಡುಬಂದಿದೆ. ಸುಮಾರು 20.3 ಮಿಲಿಯನ್ ವೀಕ್ಷಣೆ, 8,60,000 ಲೈಕ್ಸ್ ಮತ್ತು 11,09,000 ಸಾವಿರ ಕಮೆಂಟ್ಗಳನ್ನು ಹೊಂದಿದೆ.
ನಾದಕ್ಕೆ ಲಯಕ್ಕೆ ಮನಸೋಲದ ಜೀವಿಯುಂಟೆ? ಜಸ್ಟಿನ್ ಮಾತ್ರವಲ್ಲ, ಈ ಪೋಸ್ಟ್ ಹಂಚಿಕೊಂಡ ಒಬ್ಬರು, ‘ನಿಮ್ಮ ಕೆಲಸವನ್ನು ನೀವು ಹೇಗೆ ಆನಂದಿಸುತ್ತೀರಿ’ ಎಂದಿದ್ದಾರೆ. ಇನ್ನೊಬ್ಬರು, ‘ಈ ರೀತಿಯ ಶಕ್ತಿ ಬೇಕಿದೆ’ ಎಂದಿದ್ದಾರೆ.