Viral Post : ಹತ್ತಿರದಲ್ಲಿಯೇ ಅಂಧರ ಶಾಲೆ ಇದೆ ಎಚ್ಚರಿಕೆ!
Traffic Symbol : ಪ್ರಯಾಣಿಕರಾದ ಅನಿರುದ್ಧ ಚಟರ್ಜಿ ವಿಚಿತ್ರವಾದ ಹೊಸ, ಟ್ರಾಫಿಕ್ ಚಿಹ್ನೆ ನೋಡಿ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿದ್ದರು. ಎಂದಿನಂತೆ ಬೆಂಗಳೂರು ಸಂಚಾರ ಪೊಲೀಸರು ಈ ಅನುಮಾನ ಪರಿಹರಿಸಿದ್ದಾರೆ.
Viral Post : ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ರಸ್ತೆಯೊಂದರಲ್ಲಿ ಕಂಡುಬರುವ ಹೊಸ ಸೈನ್ ಬೋರ್ಡ್ ಸಾಕಷ್ಟು ಜನರನ್ನು ಯೋಚಿಸುವಂತೆ ಮಾಡಿತ್ತು. ಇದು ಬಿಳಿ ಹಿನ್ನೆಲೆ, ನಾಲ್ಕು ಕಪ್ಪು ಚುಕ್ಕೆಗಳನ್ನು ಹೊಂದಿದೆ. ಈಗ ಇದರ ಅರ್ಥವನ್ನು ಟ್ರಾಫಿಕ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ, ಪ್ರಯಾಣಿಕರಾದ ಅನಿರುದ್ಧ ಚಟರ್ಜಿ ವಿಚಿತ್ರವಾದ ಈ ಚಿಹ್ನೆಯನ್ನು ನೋಡಿ ಈ ಬಗ್ಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೈನ್‌ಬೋರ್ಡ್‌ಗಳು ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಅನುಮಾನಗಳಿಗೆ ಬೆಂಗಳೂರು ಸಂಚಾರ ಪೊಲೀಸರು ನಿಯಮಿತವಾಗಿ ಪ್ರತಿಕ್ರಿಯಿಸುತ್ತ ಬಂದಿದ್ದಾರೆ. ಈ ಪೈಕಿ ಈ ಪ್ರಶ್ನೆಗೂ ಪೊಲೀಸರು ಉತ್ತರಿಸಿ ತಿಳಿವಳಿಕೆ ನೀಡಿದ್ದಾರೆ.
ಪೋಸ್ಟ್ನಲ್ಲಿ, “ಇದು ಯಾವ ಟ್ರಾಫಿಕ್ ಚಿಹ್ನೆ? @wftrps @blrcitytraffic’ ಎಂದು ಟ್ಯಾಗ್ ಮಾಡಲಾಗಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಪೊಲೀಸರು, ‘ಆತ್ಮೀಯರೇ, ಹೋಪ್ ಫಾರ್ಮ್ ಜಂಕ್ಷನ್ ಬಳಿ ಅಂಧರ ಶಾಲೆ ಇದೆ. ಅಂಧರು ರಸ್ತೆಯಲ್ಲಿ ಓಡಾಡುವಾಗ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನಗಳನ್ನು ಚಲಿಸಬೇಕು ಎಂಬ ಸಂದೇಶವನ್ನು ನೀಡಲು ಈ ಹೊಸ ಬೋರ್ಡ್ ನಿಲ್ಲಿಸಲಾಗಿದೆ. ವಂದನೆಗಳು.’ ಎಂದು ಟ್ವೀಟ್ ಮಾಡಿದ್ಧಾರೆ.
ಟ್ರಾಫಿಕ್ ಪೊಲೀಸರ ಟ್ವೀಟ್‌ಗೆ ವೈಟ್‌ಫೀಲ್ಡ್ ಪ್ರದೇಶದವರೊಬ್ಬರು, “ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನನಗಿದು ತಿಳಿದಿರಲಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಈ ತಿಳಿವಳಿಕೆ ಹೆಚ್ಚಿಸಿದ್ದಕ್ಕೆ ಧನ್ಯವಾದ. ನಮ್ಮಲ್ಲಿ ಹೆಚ್ಚಿನವರು ಈ ರಸ್ತೆಚಿಹ್ನೆಗಳು ಮತ್ತು ಅವುಗಳ ಅರ್ಥವನ್ನು ತಿಳಿದಿಲ್ಲ” ಎಂದಿದ್ದಾರೆ. ಇನ್ನೊಬ್ಬರು, “ಟ್ರಾಫಿಕ್ ಸಿಗ್ನಲ್ಗಳ ಬಗ್ಗೆ ತಿಳಿದುಕೊಳ್ಳಲು ಟ್ವಿಟ್ಟರ್‌ನ ಈ ಖಾತೆ ಜನೋಪಕಾರಿಯಾಗಿದೆ @blrcitytraffic.’ ಎಂದಿದ್ದಾರೆ. ಮತ್ತೊಬ್ಬ ನೆಟ್ಟಗರು, ‘ಎಂವಿ ಕಾಯಿದೆ ಅಡಿಯಲ್ಲಿ ಅಂತಹ ಯಾವುದೇ ಸೈನ್ ಬೋರ್ಡ್ ಇಲ್ಲ’ ಎಂದು ಹೇಳಿದ್ದಾರೆ.
What traffic symbol is this?@wftrps @blrcitytraffic
This is put up just before Hopefarm signal!#curious pic.twitter.com/OLwW9gZiyy
— Aniruddha Mukherjee (@yesanirudh) August 1, 2022
ಇತ್ತೀಚೆಗೆ, ಬೆಂಗಳೂರು ಸಂಚಾರ ಪೊಲೀಸರು ನಗರ ಸಂಚಾರವನ್ನು ಸರಾಗಗೊಳಿಸುವ ಸಲುವಾಗಿ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ.ಆರ್. ರವಿಕಾಂತೇಗೌಡ, ‘ಇದೇ ಮೊದಲ ಬಾರಿಗೆ ಭಾರತದ ಪೊಲೀಸ್ ಇಲಾಖೆಯು ಗೂಗಲ್‌ನೊಂದಿಗೆ ನೇರವಾಗಿ ಕಾರ್ಯನಿರ್ವಹಿಸಲಿದೆ’ ಎಂದಿರುವುದನ್ನು ಇಲ್ಲಿ ಸ್ಮರಿಸಬಹುದು.
Published On - 12:17 pm, Wed, 3 August 22