ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧದಂಪತಿಗೆ ಊಟ ಕೊಡಿಸಿದ ಸಹಪ್ರಯಾಣಿಕ
Flight Journey : ಗಗನಸಖಿ ಅವರಿಗೆ ಫುಡ್ ಪ್ಯಾಕ್ ಕೊಡಲು ಹೋದಾಗ ಅವರದನ್ನು ನಿರಾಕರಿಸಿದರು. ಇದು ಅದೃಷ್ಟವಂತ ಗ್ರಾಹಕರಿಗೆ ಕೊಡುತ್ತಿರುವ ಉಚಿತ ಆಹಾರ ಎಂದು ತಿಳಿಸಲು ಹೇಳಿದೆ. ನಂತರ ಅವರಿಗೆ ತಿಳಿಯದಂತೆ ಹಣ ಪಾವತಿಸಿದೆ.
Viral Video : ಬದುಕು ಸುಂದರವಾಗುವುದು ಪರಸ್ಪರ ಸಹಾಯದಿಂದ. ಸಹಾಯದಿಂದ ಮನಸ್ಸು ಸಮಾಧಾನಗೊಳ್ಳುತ್ತದೆ, ಖುಷಿಯನ್ನು ಅನುಭವಿಸುತ್ತದೆ. ಪರರ ಬಗ್ಗೆ ಯೋಚಿಸುವಂತಹ ಗುಣಸ್ವಭಾವದವರಿಗೆ ಈ ಬಗ್ಗೆ ಖಂಡಿತ ಇದು ಅನುಭವಕ್ಕೆ ಬಂದಿರುತ್ತದೆ. ಉತ್ತರಪ್ರದೇಶದ ಈ ವೃದ್ಧ ದಂಪತಿ ಮೊದಲ ಸಲ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಳ್ಳಿಗಾಡಿನಿಂದ ಬಂದ ಇವರು ಈ ವಾತಾವರಣದಲ್ಲಿ ಸ್ವಲ್ಪ ಕಂಗಾಲಾಗಿದ್ದಾರೆ. ಆಗ ಸಹಪ್ರಯಾಣಿಕರು ಇವರಿಗೆ ಪ್ರಯಾಣದುದ್ದಕ್ಕೂ ಸಹಾಯ ಮಾಡಿದ್ದಾರೆ.
ಅಮಿತಾಬ್ ಷಾ ಎನ್ನುವವರೇ ಇವರ ಸಹಪ್ರಯಾಣಿಕರು. ಅವರು ಇವರನ್ನು ಬೋರ್ಡಿಂಗ್ನಲ್ಲಿದ್ದಾಗಲೇ ಗಮನಿಸಿದ್ದಾರೆ. ಇವರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದಲೇ ಅವರತ್ತ ನೋಡಿ ನಗು ಚೆಲ್ಲಿದ್ದಾರೆ. ನಂತರ ಏನಾಯಿತು? ಎನ್ನುವುದನ್ನು ಅವರು ಲಿಂಕ್ಡಿನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಿನ್ನೆ ನಾನು ದೆಹಲಿಯಿಂದ ಕಾನ್ಪುರಕ್ಕೆ ಹೊರಟಿದ್ದೆ. ಪ್ರಯಾಣದಲ್ಲಿ ಈ ವೃದ್ಧ ದಂಪತಿಗಳನ್ನು ನೋಡಿದೆ. ಪಾಪ ಅವರು ಬಹಳ ಸುಸ್ತಾದಂತೆ ತೋರುತ್ತಿದ್ದರು. ಮಾತನಾಡಿಸಿದಾಗ, ಅವರು ಉತ್ತರ ಪ್ರದೇಶದ ಹಳ್ಳಿಯಿಂದ ಬಂದಿರುವುದಾಗಿ ಹೇಳಿದರು. ದೆಹಲಿ ವಿಮಾನ ನಿಲ್ದಾಣ ತಲುಪಲು ಅವರು 8 ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿ ಬಂದಿದ್ದರು. ಇಂಗ್ಲಿಷ್ ಅವರಿಗೆ ಅರ್ಥವಾಗುವುದಿಲ್ಲವೆನ್ನುವುದು ಖಾತ್ರಿ ಇತ್ತು. ನಾನು ಅವರ ಬಳಿ ಹೋಗಿ ಮಾತನಾಡಿಸಿ ನನ್ನನ್ನು ಹಿಂಬಾಲಿಸಿ ಎಂದು ಹೇಳಿದೆ. ಅವರು ಹಾಗೇ ಮುಂದುವರಿದರು. ನನ್ನನ್ನು ಅವರು ವಿಮಾನ ಸಂಸ್ಥೆಯ ಸಿಬ್ಬಂದಿ ಎಂದು ಭಾವಿಸಿದರು.’
‘ಸ್ವಲ್ಪ ಹೊತ್ತಿನ ನಂತರ ಈ ಮಹಿಳೆ, ತಮ್ಮಿಬ್ಬರ ಫೋಟೋ ತೆಗೆಯಲು ಕೇಳಿಕೊಂಡರು. ‘ದಯವಿಟ್ಟು ನೀವು ನಮ್ಮಿಬ್ಬರ ಫೋಟೋ ತೆಗೆಯಬಹುದೆ? ಮತ್ತು ಈ ಫೋಟೋ ಅನ್ನು ನಮ್ಮ ಮಗಳ ವಾಟ್ಸಪ್ಗೆ ಕಳಿಸಬಹುದೆ? ಈ ಫೋಟೋ ನೋಡಿದರೆ, ನಾವು ಆರಾಮಾಗಿದ್ದೇವೆ ಎನ್ನುವುದು ಆಕೆಗೂ ತಿಳಿದಂತಾಗುತ್ತದೆ’. ಆ ಪ್ರಕಾರ ಅವರ ಮಗಳಿಗೆ ಫೋಟೋ ಕಳಿಸಿದೆ.’
‘ನಂತರ ಅವರಿಬ್ಬರಿಗೂ ಪನೀರ್ ಸ್ಯಾಂಡ್ವಿಚ್ ಮತ್ತು ಜ್ಯೂಸ್ ಕೊಡಬೇಕೆಂದು ಗಗನಸಖಿಗೆ ತಿಳಿಸಿದೆ. ಗಗನಸಖಿ ಅವರಿಗೆ ಫುಡ್ ಪ್ಯಾಕ್ ಕೊಡಲು ಹೋದಾಗ ಅವರು ಅದನ್ನು ನಿರಾಕರಿಸಿದರು. ಆಗ ಇದು ಅದೃಷ್ಟವಂತ ಗ್ರಾಹಕರಿಗೆ ಕೊಡುತ್ತಿರುವ ಉಚಿತವಾದ ತಿಂಡಿ ಎಂದು ಅವರಿಗೆ ತಿಳಿಸಲು ಹೇಳಿದೆ. ಆಗ ಅವರು ಅದನ್ನು ಸ್ವೀಕರಿಸಿದರು. ಅಷ್ಟೊಂದು ದೂರದಿಂದ ಪ್ರಯಾಣಿಸಿದ ಅವರ ಮುಖದಲ್ಲಿ ಹಸಿವು, ನೀರಡಿಕೆ ಎದ್ದು ಕಾಣುತ್ತಿತ್ತು. ನಂತರ ಗಗನಸಖಿಗೆ ನಾನು ಹಣ ಪಾವತಿಸಿದೆ.’
‘ಪ್ರಯಾಣ ಮುಗಿದ ನಂತರ ನಮ್ಮ ನಮ್ಮ ದಾರಿಯಲ್ಲಿ ನಾವು ಹೊರಟಾಗ ಅವರು ನನ್ನನ್ನು ನೋಡಿ ಸಮಾಧಾನದಿಂದ ಮುಗುಳುನಗೆ ಚೆಲ್ಲಿದರು. ಈ ಒಂದು ಪ್ರತಿಕ್ರಿಯೆ ನನ್ನನ್ನು ಆರ್ದ್ರಗೊಳಿಸಿತು.’
ಈ ಪೋಸ್ಟ್ ಓದಿದ ನೆಟ್ಟಿಗರಲ್ಲಿ ಕೆಲವರು ಷಾ ಅವರನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು, ಅನುಕಂಪವನ್ನು ಗಳಿಸಿಕೊಳ್ಳಲು ಮಾಡಿದ ಸಹಾಯವನ್ನು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳಬಾರದು ಎಂದು ಹೇಳಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:08 pm, Thu, 3 November 22