Video: ಒಂದು ಗುಂಡಿ ಮುಚ್ಚಲು ಒಂದು ಹೆಣ; ಇದು ಮಂಗಳೂರಿನ ರಸ್ತೆಯ ಅವ್ಯವಸ್ಥೆ
ಕುಳೂರಿನಲ್ಲಿ ರಸ್ತೆ ಅಪಘಾತಕ್ಕೆ ಮಹಿಳೆ ಬಲಿಯಾದ ಘಟನೆಯ ಬಳಿಕ ಅಧಿಕಾರಿಗಳು ಮಂಗಳೂರಿನ ಸುತ್ತಮುತ್ತಲಿನ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಉಳಿದ ಗುಂಡಿಗಳು ಹಾಗೆಯೇ ಇದ್ದು, ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಮಂಗಳೂರು, ಸೆಪ್ಟೆಂಬರ್ 10: ಮಂಗಳೂರಿನ ರಸ್ತೆ ಗುಂಡಿಗಳು (potholes) ನಾಗರಿಕರು ಹಾಗೂ ವಾಹನ ಸವಾರರ ಜೀವಕ್ಕೆ ಸಂಕಷ್ಟ ತಂದೊಡ್ಡಿದೆ. ಹೆದ್ದಾರಿ ಗುಂಡಿಯ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಬಲಿಯಾದ ಘಟನೆ ಇತ್ತೀಚೆಗಷ್ಟೆ ನಡೆದಿದೆ. ಬೆಳಗ್ಗೆ ಕೆಲಸಕ್ಕೆಂದು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಕುಳೂರು – ಕೊಟ್ಟಾರ ಮಧ್ಯದ ಹೆದ್ದಾರಿ ಗುಂಡಿಗೆ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಹಿಂದೆಯಿಂದ ಬಂದ ಲಾರಿಯೊಂದು ಮಹಿಳೆಯ ಮೇಲೆ ಹರಿದು ಹೋಗಿ ಮೃತ ಪಟ್ಟಿದ್ದಾರೆ. ಈ ಘಟನೆಯ ಬಳಿಕ ಹೆದ್ದಾರಿ ದುರಸ್ಥಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸ್ಥಳೀಯ ವ್ಯಕ್ತಿಯೊಬ್ಬರು ಅಧಿಕಾರಿಗಳ ಕೆಲಸ ಕಾರ್ಯಗಳು ಎಷ್ಟು ಬೇಜವಾಬ್ದಾರಿತನದಿಂದ ಕೂಡಿದೆ ಎನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಂಗಳೂರಿನ ಕೆಪಿಟಿ ರಸ್ತೆಯ (Mangalore KPT Road) ಗುಂಡಿಗಳು ಹಾಗೆಯೇ ಇದ್ದು ಈ ಬಗ್ಗೆ ವಿಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
Sowraj Manglore ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮಂಗಳೂರಿನ ಕೆಪಿಟಿ ರಸ್ತೆಯಲ್ಲಿ ಗುಂಡಿಗಳು ಹಾಗೆಯೇ ಇದ್ದು ಈ ಬಗ್ಗೆ ಪ್ರಶ್ನೆ ಮಾಡಿರುವುದನ್ನು ನೋಡಬಹುದು. ನಿನ್ನೆಯ ಘಟನೆಯ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರ್ ಹಾಕಲಾಗಿದೆ ಇದು ಒಳ್ಳೆಯ ಕೆಲಸ. ಆದರೆ ಈ ರಸ್ತೆ ಮಾತ್ರ ರಾಜ್ಯಕ್ಕೆ ಸಂಬಂಧಿಸಿದ್ದು ಅಲ್ಲ ಕಾಣಿಸುತ್ತೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದು ಕೆಪಿಟಿ ರಸ್ತೆಯಾಗಿದ್ದು, ಇದು ನಿಮಗೆ ಅಗತ್ಯವಿಲ್ವಾ. ಈ ಗುಂಡಿಗೆ ಬಿದ್ದು ಇನ್ನು ಎಷ್ಟು ಜನ ಸಾಯ್ಬೇಕು. ಈ ರಸ್ತೆಯ ಗುಂಡಿಯನ್ನು ಯಾಕೆ ಮುಚ್ಚಿಲ್ಲ, ಇದು ನಿಮಗೆ ಅಗತ್ಯವಿಲ್ವಾ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮಾತ್ರ ಮುಚ್ಚಲಾಗಿದೆ ಎಂದು ಆಕ್ರೋಶ ಭರಿತವಾಗಿ ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ನ್ನು ಹಲವಾರು ಬಳಕೆದಾರರು ವೀಕ್ಷಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಕುಡ್ಲ ಬ್ರೋ, ಇಲ್ಲಿ ಸತ್ತಲ್ಲಿ ಮಾತ್ರ ಡಾಂಬರ್ ಹಾಕುವುದು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಟೋಲ್ ಸಂಗ್ರಹ ಮಾಡ್ತಾರಲ್ವಾ, ಅವರು ಇದಕ್ಕೆ ಹೊಣೆ. ಟೋಲ್ ಗೆ ಮುತ್ತಿಗೆ ಹಾಕಿ ನೆಲಸಮ ಮಾಡಿದ್ರೆ ಬುದ್ಧಿ ಬರ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral: ಮೃತ್ಯುಕೂಪವಾದ ರಸ್ತೆ ಗುಂಡಿ; ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ
ಮತ್ತೊಬ್ಬರು, ಗೌರವಾನ್ವಿತ ನಾಗರಿಕರೇ, ಪ್ರತಿದಿನ ನಾವು ಸಂಚಾರ ಮಾಡಬೇಕಾಗಿರುವ ರಸ್ತೆಗಳಲ್ಲಿ ಕಂಡುಬರುವ ದುಸ್ಥಿತಿ ಮನಸ್ಸಿಗೆ ತುಂಬಾ ನೋವನ್ನು ಉಂಟುಮಾಡಿದೆ. ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ, ಅಪಘಾತಗಳು ಹೆಚ್ಚುತ್ತಿವೆ, ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ನಮ್ಮ ಸಂಸದರು ಮತ್ತು ಶಾಸಕರು ಜನರ ಮೂಲಭೂತ ಸಮಸ್ಯೆಗಳನ್ನು ಬಿಟ್ಟು, ಅಪರಾಧಿಗಳನ್ನು ಒಳಗೊಂಡು ಸಮಾಜಕ್ಕೆ ಬೇಕಿಲ್ಲದವರನ್ನು ಕಾಪಾಡಿ, ಪ್ರೋತ್ಸಾಹಿಸುವ ಕೆಲಸದಲ್ಲೇ ಬ್ಯುಸಿಯಾಗಿದ್ದಾರೆ. ಜನರ ಕಷ್ಟವನ್ನು ಅರಿತು, ಕೂಡಲೇ ರಸ್ತೆ ಸಮಸ್ಯೆಗೆ ಪರಿಹಾರ ಕಲ್ಪಿಸಲು ನಮ್ಮ ಜನಪ್ರತಿನಿಧಿಗಳು ಮುಂದಾಗಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








