Viral: ಮೃತ್ಯುಕೂಪವಾದ ರಸ್ತೆ ಗುಂಡಿ; ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ
ರಸ್ತೆಯ ತುಂಬೆಲ್ಲಾ ಗುಂಡಿಗಳು ಇದ್ದರೆ ಅದುವೇ ಮೃತ್ಯು ಕೂಪಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಮಂಗಳೂರು, ಸೆಪ್ಟೆಂಬರ್ 10: ಕೆಲವರು ವಾಹನ ಕೈಗೆ ಸಿಕ್ಕೊಡನೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವೇಗವಾಗಿ ವಾಹನ ಓಡಿಸುತ್ತಾರೆ. ಅದಲ್ಲದೇ, ಅತೀ ವೇಗವಾಗಿ ವಾಹನ ಓಡಿಸಿ ಅಪಘಾತಗಳಾಗಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ತುಂಬೆಲ್ಲಾ ಗುಂಡಿಗಳು ಬೀಳುತ್ತಿದ್ದು, ಇದುವೇ ಮೃತ್ಯು ಕೂಪಗಳಾಗುತ್ತಿದೆ. ಮಂಗಳೂರಿನ ಕೂಳೂರಿನಲ್ಲಿ (Kulur of Mangalore ) ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಉರುಳಿಬಿದ್ದಿದೆ. ಈ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
@mangalore city ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಅಪಘಾತದ ದೃಶ್ಯವನ್ನು ಕಾಣಬಹುದು. ದ್ವಿಚಕ್ರ ವಾಹನ ಓಡಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ವಾಹನದೊಂದಿಗೆ ರಸ್ತೆಗೆ ಉರುಳಿ ಬೀಳುವುದನ್ನು ಕಾಣಬಹುದು. ಈ ವೇಳೆಯಲ್ಲಿ ಲಾರಿಯೊಂದು ಅತಿ ವೇಗದಿಂದ ಬಂದು ರಸ್ತೆಯ ಮೇಲೆ ಬಿದ್ದಿದ್ದ ಮಹಿಳೆಯ ಮೇಲಿನಿಂದ ಸಾಗಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
🚨 A private hospital employee, lost her life in a tragic accident at Kulur, Mangalore.
While riding her scooter on the highway, she reportedly hit a large pothole, causing her to lose balance. Moments later, she was struck from behind by a truck, resulting in her death. pic.twitter.com/ZcSmd86HJ6
— Mangalore City (@MangaloreCity) September 9, 2025
ಸೆಪ್ಟೆಂಬರ್ 9ರ ಬೆಳಗ್ಗೆ 8-30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮೃತ ಪಟ್ಟ ಮಹಿಳೆಯನ್ನು ಮಾಧವಿ (44) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕ ಮೊಹಮ್ಮದ್ ಫಾರೂಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಈ ಅಪಘಾತಕ್ಕೆ ರಸ್ತೆಯ ದುಸ್ಥಿತಿಯೇ ಕಾರಣ ಎಂದು ರಾಜಕಾರಣಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಹೆದ್ದಾರಿಗಳ ನಿರಂತರ ನಿರ್ಲಕ್ಷ್ಯ ಹಾಗೂ ಕಳಪೆ ನಿರ್ವಹಣೆ, ಇತ್ತೀಚೆಗಿನ ದಿನಗಳಲ್ಲಿ ಪುನರಾವರ್ತಿತ ಅಪಘಾತಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಈ ನಿರ್ಲಕ್ಷ್ಯಕ್ಕಾಗಿ NHAI ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಇಂತಹ ಹೃದಯವಿದ್ರಾವಕ ಜೀವಹಾನಿಯನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಗುಂಡಿಯಿಂದ ಮತ್ತೊಂದು ಬಲಿ: ದುರಂತ ನಷ್ಟ ಎಂದಿದ್ದಾರೆ. ಮತ್ತೊಬ್ಬರು, ಎಂತಹ ನಾಚಿಕೆಗೇಡು.. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Wed, 10 September 25








