
ತಾಯಿ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ (mother) ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಒತ್ತೆಯಿಡುತ್ತಾಳೆ. ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ತನ್ನ ತಾಯಿಯ ತ್ಯಾಗ ಹಾಗೂ ಹೋರಾಟದ ಕಥೆಯನ್ನು ಹೇಳಿದ್ದಾರೆ. ತಮ್ಮ ಕಾಲೇಜು ಪ್ರವೇಶ ಶುಲ್ಕವನ್ನು ಪಾವತಿಸಲು ತನ್ನ ತಾಯಿ ತಮ್ಮ ಬಳೆಗಳನ್ನೇ ಅಡವಿಟ್ಟಿದ್ದರು. ಇಂದು ಫ್ಲಿಪ್‌ಕಾರ್ಟ್ ಉದ್ಯೋಗಿಯಾಗಿ ತಾಯಿಯನ್ನು ನೋಡಿಕೊಳ್ಳುವ ಮಟ್ಟಿಗೆ ಬದುಕು ಕಟ್ಟಿಕೊಂಡಿದ್ದೇನೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿ ಮಗಳ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ.
ಅನುಸ್ಮಿತಾ ಮೊಹಾಪಾತ್ರ (anusmitaaa mohapatra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಮಗಳು ತನ್ನ ತಾಯಿಯನ್ನು ತಬ್ಬಿಕೊಂಡು ಕುಳಿತಿರುವುದನ್ನು ಕಾಣಬಹುದು. ನನ್ನ ತಾಯಿ ಕಾಲೇಜು ಶುಲ್ಕಕ್ಕಾಗಿ ಸ್ವಲ್ಪವೂ ಯೋಚಿಸದೇ ತಮ್ಮ ಬಳೆಗಳನ್ನು ಅಡವಿಟ್ಟರು. ಆದರೆ ಇಂದು ನಾನು ಪ್ರತಿದಿನ ನಾನು ಫ್ಲಿಪ್‌ಕಾರ್ಟ್ ಆಫೀಸಿಗೆ ಹೋಗುತ್ತೇನೆಂದರೆ ಅದು ನನ್ನ ತಾಯಿಯಿಂದಲೇ ಹಾಗೂ ನನ್ನ ತಾಯಿಗಾಗಿಯೇ.
ಇಂದು ನನ್ನ ತಾಯಿಗೆ ಎಲ್ಲವನ್ನೂ ಕೊಡಿಸುವ ಸಾಮರ್ಥ್ಯವಿರುವ ಕೆಲಸವು ನನ್ನ ಕೈಯಲ್ಲಿದೆ. ಈ ಕೆಲಸ ನನಗೆ ಉದ್ಯೋಗ ಮಾತ್ರವಲ್ಲ. ನನ್ನ ತಾಯಿ ಪ್ರೀತಿ ತ್ಯಾಗಕ್ಕೆ ಸಿಕ್ಕ ಪ್ರತಿಫಲ ಇದು. ನಾನು ಹೆಚ್ಚೇನು ಮಾತಾಡಲ್ಲ, ಆದರೆ ಇಂದು ಈ ತ್ಯಾಗವನ್ನು ಜೋರಾಗಿ ಹೇಳಲು ಸರಿಯಾದ ದಿನವೆಂದು ಭಾವಿಸಿದೆ. ಅಮ್ಮ ಇದು ನಿನಗಾಗಿ, ಎಲ್ಲವೂ ನಿನಗಾಗಿ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಾಯಿ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದಾಗ ಮಕ್ಕಳ ಓದಿಗಾಗಿ ಕೇವಲ 3,000 ರೂ. ವೇತನದ ಸರ್ಕಾರಿ ಗುತ್ತಿಗೆ ಶಿಕ್ಷಕಿ ಕೆಲಸಕ್ಕೆ ಸೇರಿಕೊಂಡಿದ್ದರು. ಭುವನೇಶ್ವರದಿಂದ ಹನ್ನೆರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ಒಡಿಶಾದ ರಾಯಗಡ ಜಿಲ್ಲೆಯ ಅಂಬೊಡಾಲದಲ್ಲಿ ಕೆಲಸ ಸಿಕ್ಕಿತ್ತು. ಆ ವೇಳೆಗೆ ನಾನು 5 ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಮ್ಮ 3 ನೇ ತರಗತಿ ಓದುತ್ತಿದ್ದ. ಮಕ್ಕಳನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಪ್ರತಿ ಬಾರಿ ನಮ್ಮನ್ನು ಬಿಟ್ಟು ಹೋಗುವಾಗಲೂ ಕಣ್ಣೀರು ಹಾಕುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನು, ನನಗೆ ಎನ್‌ಐಟಿ ತಿರುಚ್ಚಿಯಲ್ಲಿ ಸೀಟು ಸಿಕ್ಕಾಗ, ಅಡ್ಮಿಶನ್ ಹಾಗೂ ಹಾಸ್ಟೆಲ್ ಶುಲ್ಕ ಸೇರಿ ಸರಿಸುಮಾರು 1.25 ಲಕ್ಷ ರೂ ಅಗತ್ಯವಿತ್ತು. ಆ ವೇಳೆಗೆ ಅಮ್ಮನ ಬಳಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ ಹಿಂದೆ ಮುಂದೆ ಯೋಚಿಸದೇ ನನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟರು. ಇಬ್ಬರು ಮಕ್ಕಳಿಗೂ ತಲಾ 60 ರಿಂದ 70 ಸಾವಿರ ರೂ ಬೆಲೆ ಬಾಳುವ ಲ್ಯಾಪ್‌ಟಾಪ್‌ಗಳನ್ನು ಅದೇನೋ ಮಾಡಿ ಕೊಡಿಸಿದ್ದರು ಎಂದು ತನ್ನ ತಾಯಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ.
ತನ್ನ ತಾಯಿ ತನ್ನ ಆದಾಯದಲ್ಲಿ ಏನನ್ನೂ ಉಳಿಸಲು ಸಾಧ್ಯವಿರಲಿಲ್ಲ. ಆದರೆ ಮಕ್ಕಳಿಗಾಗಿ ಎಲ್ಲವನ್ನೂ ಮಾಡಿದರು. ಇಂದು ನನ್ನ ದುಡಿಮೆ ಹಾಗೂ ನಾನು ಏನು ಮಾಡುತ್ತಿದ್ದರೂ ಅದು ಅವರಿಗಾಗಿ ಅರ್ಪಿತವಾಗಿದೆ. ನಾನು ಅವರಿಗೆ ಎಂದಿಗೂ ಕೃತಜ್ಞತರಾಗಿರಲೂ ಸಾಧ್ಯವಿಲ್ಲ. ಅವರು ನಮಗೆ ಕೊಟ್ಟಿರುವುದರಲ್ಲಿ ಒಂದು ಸಣ್ಣ ಭಾಗವಾದರೂ, ಅವಳಿಗೆ ಅರ್ಹವಾದ ಜೀವನವನ್ನು ನೀಡಲು ನಾನು ನನ್ನ ಕೈಲಾದಷ್ಟು ಮಾಡುತ್ತಲೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೆತ್ತವರನ್ನು ತಾನು ಕೆಲಸ ಮಾಡುವ ಅಮೆಜಾನ್ ಆಫೀಸಿಗೆ ಕರೆತಂದ ಉದ್ಯೋಗಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಎಂದಿಗೂ ಅಪರಿಚಿತರ ಬಗ್ಗೆ ಇಷ್ಟು ಹೆಮ್ಮೆಪಟ್ಟಿಲ್ಲ. ಧನ್ಯವಾದಗಳು ಎಂದಿದ್ದಾರೆ. ಇನ್ನೊಬ್ಬರು, ಅವರು ಮಾಡಿದ ತ್ಯಾಗವೇ ನಿಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಮುಂದೆ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ