ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್ ಮ್ಯಾಚ್ ಸ್ಕೋರ್ ಬರೆದುಕೊಟ್ಟ ಪೈಲಟ್
Cricket Match’s Score : ಕ್ರಿಕೆಟ್ ಸ್ಕೋರ್ ಅಪ್ಡೇಟ್ ಪ್ಲೀಸ್ ಅಂತ ಪೈಲಟ್ಗೆ ಕೇಳಿದ್ದಾರೆ ಈ ಪ್ರಯಾಣಿಕರು. ಇಂಡಿಗೋ ನ್ಯಾಪ್ಕಿನ್ ಮೇಲೆ ಕೈಯಿಂದ ಬರೆದು ಕೊಟ್ಟಿದ್ದಾರೆ ಪೈಲಟ್. ನೆಟ್ಟಿಗರು ಫುಲ್ ಖುಷ್!
Viral : ಕ್ರಿಕೆಟ್ನ ಹುಚ್ಚುಪ್ರೇಮ, ಇದೊಂಥರಾ ನಶಾ ಇದ್ದಹಾಗೆ. ಆಗಾಗ ಕೊನೇಪಕ್ಷ ಸ್ಕೋರ್ ಅನ್ನಾದರೂ ತಿಳಿದುಕೊಂಡರೆ ಚೂರುಪಾರು ಉಸಿರುಬರುತ್ತಿರುತ್ತದೆ ಕ್ರಿಕೆಟ್ ಪ್ರೇಮಿಗಳಿಗೆ. ಇಲ್ಲದೇ ಹೋದಲ್ಲಿ ಪೂರ್ತಿ ಹುಚ್ಚೇ! ಅಲ್ಲೆಲ್ಲೋ ಮ್ಯಾಚ್ ನಡೆಯುತ್ತಿದ್ದು ಈ ಪ್ರೇಮಿಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರಂತೂ ಕಥೆ ಅಷ್ಟೇ ಎಂದು ನಾವೆಲ್ಲಾ ಅಂದುಕೊಳ್ಳಬಹುದು. ಆದರೆ ಈಗ ಕಾಲ ಬದಲಾಗಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕರ ನಿರೀಕ್ಷೆಯನ್ನು ಪೂರೈಸುವಲ್ಲಿ ಹೆಚ್ಚು ಶ್ರಮಿಸುತ್ತಿದೆ ಎನ್ನುವುದಕ್ಕೆ ಈ ಟ್ವೀಟ್ ಉದಾಹರಣೆ. ವಿಮಾನ ಪ್ರಯಾಣದ ಮಧ್ಯೆಯೇ ಕ್ರಿಕೆಟ್ ಪ್ರೇಮಿಯೊಬ್ಬರು ಇಂಡಿಗೋ ಪೈಲಟ್ಗೆ ವಿನಂತಿಸಿಕೊಂಡು ಕ್ರಿಕೆಟ್ ಸ್ಕೋರ್ ಅನ್ನು ಕೇಳಿದ್ದಾರೆ.
India lost today but @IndiGo6E won my heart. Pilot sent a note mid air when requested for score update.#momentsthatmatter pic.twitter.com/XngFXko63T
— Vikram Garga (@vikramgarga) October 30, 2022
ಇದು ಸ್ವಲ್ಪ ಜಾಸ್ತಿಯೇ ಆಯಿತಲ್ಲವಾ ಹುಚ್ಚು? ನಿನ್ನೆ ಆಸ್ಟ್ರೇಲಿಯಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ (ICC T20) ಮ್ಯಾಚ್ ನಡೆದಿತ್ತು. ಆಗ ವಿಕ್ರಮ ಗರ್ಗ ಎಂಬ ಪ್ರಯಾಣಿಕರು ಪೈಲಟ್ಗೆ ಸ್ಕೋರ್ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಪೈಲಟ್ ವಿಮಾನ ಚಾಲನೆ ಮಾಡುತ್ತಲೇ ಕ್ರಿಕೆಟ್ ಸ್ಕೋರ್ ಅನ್ನು ತಮ್ಮ ಕೈಬರಹದಲ್ಲಿ ಅವರಿಗೆ ತಲುಪಿಸಿದ್ಧಾರೆ. ಪ್ರಯಾಣ ಮುಗಿದ ನಂತರ ವಿಕ್ರಮ ಗರ್ಗ, ‘ಮ್ಯಾಚ್ನಲ್ಲಿ ಇಂಡಿಯಾ ಸೋತಿತು ನಿಜ. ಆದರೆ @IndiGo6E ನನ್ನ ಹೃದಯ ಗೆದ್ದಿದೆ.’ ಎಂದು ಪೈಲಟ್ಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ಧಾರೆ.
ಸಾಕಷ್ಟು ಜನರು ರೀಟ್ವೀಟ್ ಮಾಡಿದ್ದಾರೆ ಈ ಪೋಸ್ಟ್ ಅನ್ನು. ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ ಪೈಲಟ್ನ ಸಹಕಾರಕ್ಕೆ. ಹಾಗೆಯೇ ಇಂಡಿಗೋ ಸಂಸ್ಥೆಯು, ಆದಷ್ಟು ಬೇಗ ಇಂಡಿಗೋ ವಿಮಾನದಲ್ಲಿ ನಿಮ್ಮನ್ನು ಮತ್ತೆ ನೋಡಲು ಇಚ್ಛಿಸುತ್ತೇವೆ ಎಂದು ಪ್ರತಿಕ್ರಿಯಿಸಿದೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:14 pm, Mon, 31 October 22