Pomegranate : ಅನುಕೂಲಕ್ಕಾಗಿ ಅನೇಕರು ಆನ್ಲೈನ್ ಶಾಪಿಂಗ್ಗೆ ಮೊರೆ ಹೋಗುವುದು ಸಾಮಾನ್ಯ. ಗ್ರಾಹಕರ ಅನುಕೂಲ ಮತ್ತು ಆಕಾಂಕ್ಷೆಗೆ ತಕ್ಕಂತೆ ಅನೇಕ ಕಂಪೆನಿಗಳು ಸುಲಿದ ಬಾಳೆಹಣ್ಣನ್ನೇ ಅವರ ಬಾಯಿಗೆ ಇಡುವಲ್ಲಿ ಪೈಪೋಟಿ ನಡೆಸುವುದಂತೂ ಈಗೀಗ ತೀರಾ ಸಾಮಾನ್ಯ. ಅಂತೆಯೇ ಕತ್ತರಿಸಿದ ತರಕಾರಿ, ಹಣ್ಣು, ಸೊಪ್ಪು ಮುಂತಾದವುಗಳು ನೇರ ಬಾಣಲೆಗೆ ಇಲ್ಲವೆ ಪ್ಲೇಟಿಗೆ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಗಮನಿಸಿ. ಯೂಟ್ಯೂಬರ್ ಸಮದೀಶ್ ಭಾಟಿಯಾ ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ (Swiggy Instamart) ನಿಂದ ಸುಲಿದ ದಾಳಿಂಬೆಯನ್ನು ಆರ್ಡರ್ ಮಾಡಿದ್ದಾರೆ. ಆದರೆ ಪ್ಯಾಕೆಟ್ ಬಿಚ್ಚುತ್ತಿದ್ದಂತೆ ಅವರ ಮೂಗಿಗೆ ನೇಲ್ಪಾಲಿಷ್ನ ವಾಸನೆ ಅಡರಿಬಿಟ್ಟಿದೆ!
ಸಮದೀಶ್ ದಾಳಿಂಬೆಯನ್ನು ಬಾಯಿಗಿಟ್ಟಾಗ ಹುಳಿಹುಳಿ ಅನ್ನಿಸಿ ಉಗಿದೇ ಬಿಟ್ಟರು. ನಂತರ ಇನ್ಸ್ಟಾಗ್ರಾಂನಲ್ಲಿ ತಮಗಾದ ಅನುಭವವನ್ನು ಫೋಟೋ ಸಮೇತ ಪೋಸ್ಟ್ ಮಾಡಿದರು. ‘ಒಂದು ಚಮಚ ದಾಳಿಂಬೆಯನ್ನು ಬಾಯಿಯೊಳಗೆ ಹಾಕಿಕೊಂಡೆ. ಆದರೆ ಇದು ದಾಳಿಂಬೆಯಂತಿರದೆ ಬೇರೆಯದೇ, ಆದರೆ ನನಗೆ ಗೊತ್ತಿರುವಂಥ ವಾಸನೆಯಿಂದ ಕೂಡಿತ್ತು. ಅದು ಏನೆಂದರೆ ನೇಲ್ಪಾಲಿಷ್! ಇದನ್ನು ತಕ್ಷಣವೇ ಉಗುಳಿದೆನಾದರೂ ಎರಡು ದಿನಗಳವರೆಗೆ ನನ್ನ ನಾಲಗೆ ಸುಟ್ಟಂತೆ ಚುರುಗುಡುತ್ತಲೇ ಇತ್ತು’ ಎಂದಿದ್ದಾರೆ.
ಇದನ್ನೂ ಓದಿ : Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!
ನಿನ್ನೆ ಹಂಚಿಕೊಂಡ ಈ ಪೋಸ್ಟ್ ಅನ್ನು ಈತನಕ ಸುಮಾರು 5,000 ಜನರು ಲೈಕ್ ಮಾಡಿದ್ದಾರೆ. ಆನ್ಲೈನ್ನಲ್ಲಿ ತಮಗಾದ ಅನುಭವಗಳನ್ನು ಅನೇಕರು ಹಂಚಿಕೊಂಡಿದ್ದಾರೆ. ಬಿಡಿಸಿಟ್ಟ ಹಣ್ಣುಗಳನ್ನು ಪ್ಯಾಕ್ ಮಾಡಿಟ್ಟು ಬಹಳ ದಿನಗಳಾದಾಗ ರಾಸಾಯನಿಕ ಪ್ರಕ್ರಿಯೆಗಳು ನಡೆದು ಹೀಗೆ ಆಗುವ ಸಂಭವ ಇರುತ್ತದೆ ಎಂದು ಕೆಲವರು ಹೇಳಿದ್ದಾರೆ. ಅಲ್ಲದೆ, ತಾಜಾತನದಿಂದ ಕೂಡಿರಲೆಂದು ಹಾಕಿಟ್ಟ ಪ್ರಿಸರ್ವೇಟಿವ್ನಿಂದಲೂ ಹೀಗೆ ವಾಸನೆ ಬರುವ ಸಾಧ್ಯತೆ ಇದೆ ಎಂದಿದ್ಧಾರೆ ಒಬ್ಬರು.
ಇದನ್ನೂ ಓದಿ : Viral Video: ಹರಿಯಾಣ; 13 ಗಂಟೆಗಳ ಕ್ಯಾಬ್ರೈಡ್; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ
ಇದೇ ಅರ್ಬನ್ ಹಾರ್ವೆಸ್ಟ್ ನಿಂದ ಪಪ್ಪಾಯಿಯನ್ನು ಆರ್ಡರ್ ಮಾಡಿದ್ದೆ. ಕೆಲ ಕಾರಣಗಳಿಂದ ನಾನದನ್ನು ತಿನ್ನದೇ ಈತನಕವೂ ಫ್ರಿಡ್ಜ್ನಲ್ಲಿಟ್ಟಿದ್ದೇನೆ. ಈಗದನ್ನು ತೆಗೆದು ಅದರಿಂದ ಯಾವ ವಾಸನೆ ಹೊಮ್ಮುತ್ತದೆ ಎಂದು ಪತ್ತೆ ಹಚ್ಚಲು ಕುತೂಹಲ ಉಂಟಾಗುತ್ತಿದೆ ಎಂದು ಸ್ವಿಗ್ಗಿ ಇನ್ಸ್ಟಾಮಾರ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ ಒಬ್ಬರು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅರ್ಬನ್ ಹಾರ್ವೆಸ್ಟ್, ‘ನೈಸರ್ಗಿಕವಾಗಿ ಸಿಗುವ ದಾಳಿಂಬೆಯ ರುಚಿಯನ್ನು, ಘಮವನ್ನು ಬದಲಾಯಿಸಿಲ್ಲ ಮತ್ತು ನೇಲ್ ಪಾಲಿಶ್ನಲ್ಲಿಯೇ ದಾಳಿಂಬೆಯ ಪರಿಮಳ ಅಡಕವಾಗಿರುತ್ತದೆ. ಈ ವಿಚಾರವಾಗಿ ಭಾಟಿಯಾ ಅವರನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದೆವು, ಆದರೆ ಅವರು ಪ್ರತಿಕ್ರಿಯಿಸಿಲ್ಲ. ಈ ವಿಷಯವಾಗಿ ಅವರನ್ನು ನೇರ ಸಂಪರ್ಕಿಸಿ ಪರಿಹರಿಸಲು ಇಚ್ಛಿಸುತ್ತೇವೆ’ ಎಂದು ತಿಳಿಸಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:34 pm, Thu, 27 July 23