ಹೆರಿಗೆ ನೋವಿಂದ ನರಳುತ್ತಿದ್ದ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು 20 ಕಿ.ಮೀ ನಡೆದ ಗ್ರಾಮಸ್ಥರು; ವಿಡಿಯೋ ವೈರಲ್
ತೆಲಂಗಾಣ ಜಿಲ್ಲೆಯ ಕೊರ್ಕಟ್‌ಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರು. ಆಗ ಆಕೆಯ ನೆರವಿಗೆ ಬಂದ ಗ್ರಾಮಸ್ಥರು ಎರಡು ಬಿದಿರಿನ ತುಂಡಿಗೆ ಬಟ್ಟೆಯನ್ನು ಕಟ್ಟಿ ಡೋಲಿ ಮಾಡಿಕೊಂಡು, ಅದರಲ್ಲಿ ಆಕೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ.
ಹೈದರಾಬಾದ್: ಕುಗ್ರಾಮವೊಂದರ ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯೊಬ್ಬರನ್ನು ಡೋಲಿಯಲ್ಲಿ ಮಲಗಿಸಿಕೊಂಡು, 20 ಕಿ.ಮೀ. ಹೆಗಲ ಮೇಲೆ ಹೊತ್ತೊಯ್ದಿರುವ ಹೃದಯ ವಿದ್ರಾವಕ ಘಟನೆಯೊಂದು ತೆಲಂಗಾಣದ (Telangana) ಭದ್ರಾದ್ರಿ-ಕೊಥಗುಡೆಂ ಜಿಲ್ಲೆಯಲ್ಲಿ ನಡೆದಿದೆ. ಆ ಊರಿಗೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದ ಗರ್ಭಿಣಿಯನ್ನು ಆ ಊರಿನ ಗ್ರಾಮಸ್ಥರು ಡೋಲಿಯಲ್ಲಿ ಮಲಗಿಸಿಕೊಂಡು, ಬೆಟ್ಟವನ್ನು ಹತ್ತಿ ಕಾಡಿನಲ್ಲಿ ನಡೆದುಕೊಂಡು ಆಸ್ಪತ್ರೆ ತಲುಪಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೂಲ ಸೌಕರ್ಯಗಳಿಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಈ ರೀತಿ ಜನರು ದಿನವೂ ಪರದಾಡುವಂತಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಘಟನೆಯ ವಿಡಿಯೋದಲ್ಲಿ ಗ್ರಾಮಸ್ಥರು ತಮ್ಮ ಹೆಗಲ ಮೇಲೆ ‘ಡೋಲಿ’ಯಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತು ಹೋಗಿದ್ದಾರೆ. ಸುರಿಯುತ್ತಿರುವ ಮಳೆಯಲ್ಲೇ ಆಕೆಯನ್ನು ಹೆಗಲಲ್ಲಿ ಎತ್ತಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು? ಮಗುವಿನ ಆರೋಗ್ಯಕ್ಕೆ ಈ ಆಹಾರ ಬಳಸಿ
ಗ್ರಾಮಸ್ಥರು ತಮ್ಮ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸತ್ಯನಾರಾಯಣಪುರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿಯಲ್ಲಿ ಆ ಮಹಿಳೆಯನ್ನು ಹೊತ್ತುಕೊಂಡು ಮಳೆನೀರು ತುಂಬಿದ ಪ್ರದೇಶಗಳಲ್ಲಿ ಸಂಚರಿಸುವುದನ್ನು ಸಹ ಕಾಣಬಹುದು.
4TV UPDATES **Tribals carrying a pregnant woman to a hospital, as there is no road connectivity in Charla mandal in Bhadradri-Kothagudem district pic.twitter.com/VkDG3r2feC
— Shakeel Yasar Ullah (@yasarullah) September 6, 2023
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತೆಲಂಗಾಣ ಜಿಲ್ಲೆಯ ಬೋಧನಿಲ್ಲಿ ಗ್ರಾಮ ಪಂಚಾಯತ್‌ನ ಕೊರ್ಕಟ್‌ಪಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮರಕ್ಕಮ್ ಕೋಸಿ ಎಂಬ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರು. ಆಗ ಆಕೆಯ ನೆರವಿಗೆ ಬಂದ ಗ್ರಾಮಸ್ಥರು ಎರಡು ಬಿದಿರಿನ ತುಂಡಿಗೆ ಬಟ್ಟೆಯನ್ನು ಕಟ್ಟಿ ಡೋಲಿ ಮಾಡಿಕೊಂಡು, ಅದರಲ್ಲಿ ಆಕೆಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ವೈರಲ್ ವೀಡಿಯೋ ನೋಡಿ: ರಕ್ಷಾಬಂಧನಕ್ಕೆ ಅಣ್ಣನಿಗೆ ರಾಖಿ ಕಟ್ಟಿದ ಮೇಲೆ ಗುಟ್ಕಾ ತಿನ್ನಿಸಿದಳು ತಂಗಿಯವ್ವ!
ಸ್ಥಳೀಯರ ಪ್ರಕಾರ, ಗ್ರಾಮದ ಗರ್ಭಿಣಿ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ‘ಡೋಲಿ’ಯಲ್ಲಿ ಹೊತ್ತುಕೊಂಡು ಹೋಗಿದ್ದು ಇದೇ ಮೊದಲಲ್ಲ. ಛತ್ತೀಸ್‌ಗಢದ ಗಡಿಗೆ ಸಮೀಪದಲ್ಲಿರುವ ಈ ಪ್ರದೇಶದ ಸುಮಾರು 25 ಬುಡಕಟ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕದ ಕೊರತೆಯಿದೆ ಎನ್ನಲಾಗಿದೆ. ಕೊರ್ಕಟ್‌ಪಾಡು ಕುಗ್ರಾಮವು ಸುಮಾರು 40 ಬುಡಕಟ್ಟು ಕುಟುಂಬಗಳನ್ನು ಹೊಂದಿದ್ದು, ಒಟ್ಟು 200 ಜನಸಂಖ್ಯೆಯನ್ನು ಹೊಂದಿದೆ.
ಆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಕೆಲವೇ ಗಂಟೆಗಳಲ್ಲಿ ಆಕೆಗೆ ಹೆರಿಗೆಯಾಗಿದೆ. ರಕ್ತದೊತ್ತಡ ಹೆಚ್ಚಾಗಿದ್ದರಿಂದ ಸಿಸೇರಿಯನ್ ಮೂಲಕ ಆಕೆಗೆ ಹೆರಿಗೆ ಮಾಡಿಸಲಾಗಿದ್ದು, 2.6 ಕೆಜಿ ತೂಕದ ಆರೋಗ್ಯವಂತ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ