‘ವ್ಯಾನ್ ಗೋ’ ಎಂಬ ನಾಲ್ಕು ಕಾಲಿನ ಈ ಕಲಾವಿದನ ಚಿತ್ರಗಳು ವೈರಲ್; ಖರೀದಿಸಲು ಮುಗಿಬಿದ್ದ ನೆಟ್ಟಿಗರು
Rescue Dog : ಝಿಪ್ಲಾಕ್ ಕವರ್ನಲ್ಲಿ ಕ್ಯಾನ್ವಾಸ್, ಬಣ್ಣಗಳನ್ನು ತುಂಬಿಸಿ ಮೇಲೆ ಒಂದು ಪದರ ಬೆಣ್ಣೆ ಸವರಿ ಕೊಟ್ಟರೆ ಸಾಕು, ‘ವ್ಯಾನ್ಗೋ’ ನಾಲಗೆಯನ್ನೇ ಬ್ರಷ್ ಮಾಡಿಕೊಂಡು ಪೇಂಟಿಂಗ್ನಲ್ಲಿ ಮಗ್ನನಾಗುತ್ತಾನೆ.
Viral : ನಮ್ಮ ನಮ್ಮ ಪ್ರತಿಭಾಪ್ರದರ್ಶನಳ ಜೊತೆಗೆ ನಮ್ಮ ಮಕ್ಕಳ ಪ್ರತಿಭೆಯನ್ನೂ ಈಗ ಆನ್ಲೈನ್ನಲ್ಲಿ ಪ್ರದರ್ಶಿಸುವ ಭರಾಟೆಯಲ್ಲಿ ನಾವು ಮುಳುಗಿದ್ದೇವೆ. ಅದರ ಮುಂದಿನ ಹಂತದಲ್ಲಿ ನಮ್ಮ ಸಾಕುಪ್ರಾಣಿಗಳದ್ದು. ಈಗ ಈ ವ್ಯಾನ್ ಗೋ ಎಂಬ ಕಲಾವಿದ ಮಾಡಿದ ಪೇಂಟಿಂಗ್ ವೈರಲ್ ಆಗುತ್ತಿವೆ. ಈ ವ್ಯಾನ್ ಗೋ ನಾಲ್ಕು ಕಾಲಿನ ಕಲಾವಿದ. ಇವನಿಗೆ ಒಂದು ಝಿಪ್ ಲಾಕ್ ಕವರ್ನಲ್ಲಿ ಬಣ್ಣಗಳನ್ನು ತುಂಬಿಸಿ ಕೊಟ್ಟರೆ ನಾಲಗೆಯನ್ನೇ ಬ್ರಷ್ ಮಾಡಿಕೊಂಡುಬಿಡುತ್ತಾನೆ.
ಇದು ಸಾಕು ನಾಯಿಯಲ್ಲ, ರಕ್ಷಿಸಿದ ನಾಯಿ. ಇದನ್ನು ರಕ್ಷಿಸಿದ ಹ್ಯಾಪಿಲಿ ಫರ್ಎವರ್ ಆಫ್ಟರ್ ರೆಸ್ಕ್ಯೂ ಎಂಬ ಸಂಸ್ಥೆಯ ಫೇಸ್ಬುಕ್ ಪುಟವು ಈ ಫೋಟೋಗಳನ್ನು ಹಂಚಿಕೊಂಡಿದೆ. ವ್ಯಾನ್ ಗೋ ಈ ಕಲಾಕೃತಿಗಳನ್ನು ಬಹಳ ಕಷ್ಟಪಟ್ಟು ಮಾಡಿದ್ದಾನೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ ಮತ್ತು ಹೇಗೆ ಪೇಂಟ್ ಮಾಡುತ್ತಾನೆ ಎನ್ನುವುದನ್ನೂ ವಿವರಿಸಲಾಗಿದೆ.
ಇವನ ಈ ಕಲಾಚಾತುರ್ಯ ನೋಡಿದ ನೆಟ್ಟಿಗರು, ಎಲ್ಲಿ ಇವನ ಕಲಾಕೃತಿಗಳನ್ನು ಕೊಳ್ಳಬಹುದು ಎಂದು ಕೇಳಿದ್ಧಾರೆ. ಇವನ ಎರಡು ಕಲಾಕೃತಿಗಳು ನನಗೆ ಇಷ್ಟವಾಗಿವೆ, ನನ್ನ ಇಬ್ಬರು ಮಕ್ಕಳ ಕೋಣೆಗೆ ಇವುಗಳನ್ನು ಖರೀದಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ ಒಬ್ಬರು. ಎಂಥ ಪ್ರತಿಭಾನ್ವಿತ ಈತ ಎಂದಿದ್ದಾರೆ ಇನ್ನೊಬ್ಬರು. ನಂಬಲು ಅಸಾಧ್ಯ! ಎಷ್ಟು ಏಕಾಗ್ರಚಿತ್ತದಿಂದ ಪೇಂಟ್ ಮಾಡುತ್ತಿದ್ದಾನೆ ಈತ ಎಂದಿದ್ದಾರೆ ಮಗದೊಬ್ಬರು. ಖಂಡಿತ ನಾನು ಇವನ ಚಿತ್ರಗಳನ್ನು ಖರೀದಿಸಲು ಇಷ್ಟಪಡುತ್ತೇನೆ, ದಯವಿಟ್ಟು ಹೇಗೆಂದು ತಿಳಿಸಿ ಎಂದಿದ್ದಾರೆ ಇನ್ನೂ ಒಬ್ಬರು.
ಮನುಷ್ಯ ತನ್ನ ಚಂಚಲವಾದ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಏನೆಲ್ಲ ಸಾಹಸಗಳನ್ನು ಮಾಡುತ್ತಿರುತ್ತಾನೆ ಇನ್ನು ಪ್ರಾಣಿಗಳು!? ಇವುಗಳನ್ನು ಹೀಗೆಲ್ಲ ಪಳಗಿಸಬೇಕೆಂದರೆ ನಿಜವಾದ ಆಸ್ಥೆ, ಪ್ರೀತಿ ಇರಬೇಕು. ಈ ಎರಡೂ ಇದ್ದಲ್ಲಿ ಪ್ರಾಣಿಯಂಥ ಪ್ರಾಣಿಯೂ ಕಲೆಗೆ ಶರಣಾಗುತ್ತದೆ. ಹಾಗಿದ್ದರೆ ಮನುಷ್ಯ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:07 pm, Mon, 7 November 22