ಕೊವಿಡ್ ಚಿಕಿತ್ಸೆ ಬಳಿಕ ಕಂದು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿದ ಮಗುವಿನ ಕಣ್ಣು

ಕೊವಿಡ್ ಔಷಧಿಯನ್ನು ಪ್ರಾರಂಭಿಸಿದ ಕೇವಲ 18 ಗಂಟೆಗಳ ನಂತರ ಆ ಮಗುವಿನ ತಾಯಿಯು ತನ್ನ ಮಗುವಿನ ಕಣ್ಣಿನ ಬಣ್ಣದಲ್ಲಿ ಬದಲಾವಣೆಯಾಗುತ್ತಿರುವುದನ್ನು ಗಮನಿಸಿದಳು. ಗಾಢ ಕಂದು ಬಣ್ಣದಲ್ಲಿದ್ದ ಮಗುವಿನ ಕಣ್ಣಿನ ಬಣ್ಣ ನೀಲಿ ಬಣ್ಣಕ್ಕೆ ಪರಿವರ್ತನೆಯಾಗಿತ್ತು.

ಕೊವಿಡ್ ಚಿಕಿತ್ಸೆ ಬಳಿಕ ಕಂದು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿದ ಮಗುವಿನ ಕಣ್ಣು
ಥೈಲ್ಯಾಂಡ್​ನಲ್ಲಿ ಮಗುವಿನ ಕಣ್ಣು ಕಂದು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿರುವುದು.
Image Credit source: Frontiers.org

Updated on: Sep 07, 2023 | 1:18 PM

ಕೊವಿಡ್-19 2020-21ರಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಒಂದು ಮಾರಣಾಂತಿಕ ಕಾಯಿಲೆ. ಈ ರೋಗಕ್ಕೆ ಲಸಿಕೆ ಪಡೆದವರಲ್ಲಿ ಅನೇಕರಿಗೆ ಬೇರೆ ಬೇರೆ ರೀತಿಯಲ್ಲಿ ಅಡ್ಡಪರಿಣಾಮಗಳು ಉಂಟಾಗಿದ್ದವು. ಕೊವಿಡ್ ಲಸಿಕೆಯ ಅಡ್ಡ ಪರಿಣಾಮದಿಂದಲೇ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಅದಕ್ಕೆ ಇನ್ನೂ ಯಾವುದೇ ಪುರಾವೆ ಸಿಕ್ಕಿಲ್ಲ. ಇದರ ನಡುವೆ, ಥೈಲ್ಯಾಂಡ್​ನಲ್ಲಿ ಕೊವಿಡ್-19 ಲಸಿಕೆ ಪಡೆದ ಬಾಲಕನೊಬ್ಬನಲ್ಲಿ ಅಚ್ಚರಿಯ ಬದಲಾವಣೆ ಕಂಡುಬಂದಿದ್ದು, ಲಸಿಕೆಯನ್ನು ಪಡೆಯುವ ಮೊದಲು ಗಾಢ ಕಂದು ಬಣ್ಣದಲ್ಲಿದ್ದ ಕಣ್ಣು ಲಸಿಕೆ ಪಡೆದ ಬಳಿಕ ನೀಲಿ ಬಣ್ಣಕ್ಕೆ ತಿರುಗಿದೆ!

ಕೊವಿಡ್ ಲಸಿಕೆಯ ಅಡ್ಡ ಪರಿಣಾಮದ ಅಸಾಮಾನ್ಯ ನಿದರ್ಶನದಲ್ಲಿ ಇದು ಕೂಡ ಒಂದಾಗಿದೆ. ವೈದ್ಯಕೀಯ ಜರ್ನಲ್ ಫ್ರಾಂಟಿಯರ್ಸ್ ಇನ್ ಪೀಡಿಯಾಟ್ರಿಕ್ಸ್ ಪ್ರಕಾರ, ಥೈಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಮಗುವಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಆ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆತನಿಗೆ ಕೊವಿಡ್ ಸೋಂಕು ತಗುಲಿರುವುದು ದೃಢಪಟ್ಟಿತು. ಆ ಮಗುವಿಗೆ 3 ದಿನಗಳ ಕಾಲ ಫೆವಿಪಿರಾವಿರ್ ಔಷಧದೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಆ ಚಿಕಿತ್ಸೆಯು ಕೊರೊನಾ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡಿತು ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಸೂಜಿ ಇಲ್ಲದೆ ನೀಡಬಹುದಾದ mRNA ಆಧಾರಿತ ಕೊವಿಡ್ ಬೂಸ್ಟರ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ

ಆದರೆ, ಆ ಔಷಧಿಯನ್ನು ಪ್ರಾರಂಭಿಸಿದ ಕೇವಲ 18 ಗಂಟೆಗಳ ನಂತರ ಆ ಮಗುವಿನ ತಾಯಿಯು ತನ್ನ ಮಗುವಿನ ಕಣ್ಣಿನ ಬಣ್ಣದಲ್ಲಿ ಬದಲಾವಣೆಯಾಗುತ್ತಿರುವುದನ್ನು ಗಮನಿಸಿದಳು. ಗಾಢ ಕಂದು ಬಣ್ಣದಲ್ಲಿದ್ದ ಮಗುವಿನ ಕಣ್ಣಿನ ಬಣ್ಣ ನೀಲಿ ಬಣ್ಣಕ್ಕೆ ಪರಿವರ್ತನೆಯಾಗಿತ್ತು.

ಇದರಿಂದ ಚಕಿತರಾದ ವೈದ್ಯರು ಫೇವಿಪಿರಾವಿರ್ ಚಿಕಿತ್ಸೆಯನ್ನು ನಿಲ್ಲಿಸಿದ 5 ದಿನಗಳ ನಂತರ ಮತ್ತೆ ಆ ಮಗುವಿನ ಕಣ್ಣಿನ ಬಣ್ಣ ಕಂದು ಬಣ್ಣಕ್ಕೆ ಮರಳಿತು. ಇದರಿಂದ ಆ ಚಿಕಿತ್ಸೆಯನ್ನು ನಿಲ್ಲಿಸಲು ವೈದ್ಯರು ಆದೇಶಿಸಿದ್ದಾರೆ. ಆ ಮಗುವಿನ ಕಣ್ಣುಗಳನ್ನು ಹೊರತುಪಡಿಸಿ ಚರ್ಮ, ಉಗುರುಗಳು, ಬಾಯಿ ಮತ್ತು ಮೂಗಿನ ಲೋಳೆಪೊರೆಯಂತಹ ಇತರ ಪ್ರದೇಶಗಳಲ್ಲಿ ಯಾವುದೇ ನೀಲಿ ಬಣ್ಣ ಉಂಟಾಗಿಲ್ಲ. ಆ ಔಷಧವನ್ನು ನಿಲ್ಲಿಸಿದ ನಂತರ 5ನೇ ದಿನದಂದು ಮಗುವಿನ ಕಾರ್ನಿಯಾ ಸಾಮಾನ್ಯ ಬಣ್ಣಕ್ಕೆ ಮರಳಿತು.

ಇದನ್ನೂ ಓದಿ: Covid Guidelines: ಕೊವಿಡ್ ಹೆಚ್ಚಳದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

2022ರಲ್ಲಿ ಥಾಯ್ ಸಾರ್ವಜನಿಕ ಆರೋಗ್ಯ ಸಚಿವಾಲಯವು ಅನುಮೋದಿಸಿದ ಆಂಟಿವೈರಲ್ ಚಿಕಿತ್ಸೆಯಾದ ಫೇವಿಪಿರಾವಿರ್ ಲಸಿಕೆಯನ್ನು ಕೊವಿಡ್​ನ ಲಕ್ಷಣಗಳಿರುವ ಮಕ್ಕಳಿಗೆ ನೀಡಲಾಗುತ್ತದೆ. ಈ ಹಿಂದೆ 2021ರಲ್ಲಿ ಕೂಡ ಭಾರತದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಫೇವಿಪಿರಾವಿರ್ ಚಿಕಿತ್ಸೆ ಪಡೆಯುತ್ತಿದ್ದಂತೆ ಆತನ ಕಣ್ಣು ನೀಲಿ ಬಣ್ಣಕ್ಕೆ ತಿರುಗಿದ್ದನ್ನು ನೆನಪಿಸಿಕೊಳ್ಳಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us