Video: ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹೈಸ್ಕೂಲ್ ಹುಡುಗಿ
ಕೆಲ ಪುಂಡರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುವಂತಹ ಹುಡುಗಿಯರು, ಯುವತಿಯರನ್ನು ಚುಡಾಯಿಸುವಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಹೈಸ್ಕೂಲ್ ಹುಡುಗಿಯೊಬ್ಬಳನ್ನು ಚುಡಾಯಿಸಿದ್ದು, ಇದರಿಂದ ಕೋಪಗೊಂಡ ಆ ಹುಡುಗಿ ಚುಡಾಯಿಸಿದಾತನನ್ನು ನಡು ರಸ್ತೆಯಲ್ಲಿ ನಿಲ್ಲಿಸಿ, ಚಪ್ಪಲಿ ಏಟು ನೀಡಿದ್ದಾಳೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಹುಡುಗಿಯ ಧೈರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.

ಉತ್ತರ ಪ್ರದೇಶ, ಜುಲೈ, 20: ಕೆಲವೊಂದು ಘಟನೆಗಳನ್ನು ನೋಡಿದ್ರೆ ಹೆಣ್ಣುಮಕ್ಕಳು ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುವುದೇ ಕಷ್ಟಕರ ಎಂದೆನಿಸುತ್ತದೆ. ಒಂದೆಡೆ ಸರಗಳ್ಳರು, ಕಳ್ಳಕಾರರ ಕಾಟವಾದ್ರೆ, ಇನ್ನೊಂದೆಡೆ ಪುಂಡರ ಕಾಟ. ಹೌದು ಒಬ್ಬಂಟಿಯಾಗಿ ಓಡಾಡುವ ಹುಡುಗಿಯರನ್ನೇ ಗುರಿಯಾಗಿಸಿಕೊಂಡು ಕೆಲ ಪುಂಡರು ಚುಡಾಯಿಸುವಂತಹ (mischievousness) ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಇಂತಹ ಸಂದರ್ಭದಲ್ಲಿ ಹುಡುಗಿಯರು ಭಯ ಬಿದ್ದು ಓಡಿ ಹೋಗ್ತಾರೆ. ಆದ್ರೆ ಇಲ್ಲೊಬ್ಬಳು ಹುಡುಗಿ ತನ್ನನ್ನು ಚುಡಾಯಿಸಿದಾತನಿಗೆ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಉತ್ತರ ಪ್ರದೇಶದಲ್ಲಿ ಹೈ ಸ್ಕೂಲ್ ಹುಡುಗಿಯೊಬ್ಬಳು (School Girl) ತನ್ನನ್ನು ಚುಡಾಯಿಸಿದಂತಹ ವ್ಯಕ್ತಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಧರ್ಮದೇಟು ನೀಡಿದ್ದು, ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಚುಡಾಯಿಸಿದಾತನಿಗೆ ಚಪ್ಪಲಿ ಏಟು ಕೊಟ್ಟ ಹುಡುಗಿ:
ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದ್ದು, ತನ್ನನ್ನು ಚುಡಾಯಿಸಿದಾತನಿಗೆ ಯುವತಿಯೊಬ್ಬಳು ಚಪ್ಪಲಿ ಏಟು ನೀಡಿದ್ದಾಳೆ. ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯನ್ನು ಚುಡಾಯಿಸಿದ್ದು, ಇದರಿಂದ ಕೋಪಗೊಂಡ ಆಕೆ ಆತನ ಕಾಲರ್ ಹಿಡಿದು, ಹುಡುಗಿಯನ್ನು ಚುಡಾಯಿಸುತ್ತೀಯಾ ಎಂದು ನಡು ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾಳೆ.
ಈ ಕುರಿತ ವಿಡಿಯೋವನ್ನು Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು “ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Unnao: Student beats molester with slippers, He allegedly molested her while she was going to school, Pony Road, Gangaghat Kotwali Unnao UP pic.twitter.com/Q8tcUYiQjM
— Ghar Ke Kalesh (@gharkekalesh) July 20, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶಾಲಾ ವಿದ್ಯಾರ್ಥಿನಿ ವ್ಯಕ್ತಿಯೊಬ್ಬನಿಗೆ ನಡು ರಸ್ತೆಯಲ್ಲಿ ಧರ್ಮದೇಟು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಲು ಯತ್ನಿಸಿದ್ದು, ಇದರಿಂದ ಸಿಟ್ಟಿಗೆದ್ದ ಆಕೆ, ಆ ವ್ಯಕ್ತಿಯ ಕಾಲರ್ ಹಿಡಿದು ನಡು ರಸ್ತೆಗೆ ದರದರನೇ ಎಳೆದು ತಂದು ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿಯಾ ಎಂದು ಹೇಳಿ ಎಲ್ಲರೆದುರಲ್ಲೇ ಚಪ್ಪಲಿ ಏಟು ನೀಡಿದ್ದಾಳೆ.
ಇದನ್ನೂ ಓದಿ: ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವೇಳೆ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ
ಜುಲೈ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 44 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಿ ನಿಂತುಕೊಂಡು ನೋಡುತ್ತಿದ್ದ ಒಬ್ಬರಾದ್ರೂ ಹುಡುಗಿಯ ಸಹಾಯಕ್ಕೆ ಬಂದ್ರಾ? ಅವರಿಗೆ ನಾಚಿಕೆ ಆಗ್ಬೇಕು, ಆದ್ರೂ ಈ ಹುಡುಗಿಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಹುಡುಗಿಗೆ ಖಂಡಿತ ಪ್ರಶಸ್ತಿ ನೀಡಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾಳೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








