Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
Reel: ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ. ಮುಂದೇ? ನೀವೇ ನೋಡಿ, ಕೇಳಿ.
Bengaluru: ಸಾಮಾಜಿಕ ಜಾಲತಾಣಗಳ ಮೂಲಕ ಮನರಂಜನೆ ಮತ್ತು ಹಾಸ್ಯಕ್ಕೆ ಗಮನಾರ್ಹ ‘ಭಾಷ್ಯ’ ಬರೆಯುತ್ತಿರುವ ಕೆಲವೇ ಕೆಲ ಕಲಾವಿದರ ಪೈಕಿ ‘ವಿಕಿಪೀಡಿಯಾ’ದ ವಿಕಾಸ ಕೂಡ ಒಬ್ಬರು. ಯಾವ ವಿಕಾಸ, ಎಂಬ ಪ್ರಶ್ನೆ ಉಂಟಾಯಿತೇ? ಅದೇ ಆನ್ಲೈನ್ನಲ್ಲಿ ರಮ್ಮಿ ಆಡಿ ಬೀದಿಗೆ ಬಂದ ಮುದ್ದುಕುಮಾರ! ಸಹ ಕಲಾವಿದರಾದ ಅಮಿತ್ ಚಿಟ್ಟೆ, ಶಾಯನ್ ಭಟ್ಟಾಚಾರ್ಯರೊಂದಿಗೆ ಮನರಂಜನೆಯ ಮೂಲಕ ನೋಡುಗರಲ್ಲಿ ವಿವೇಚನೆಯನ್ನೂ ಹುಟ್ಟುಹಾಕುವ ಸೃಜನಶೀಲ ಕಲಾವಿದ ವಿಕಾಸ. ಇದೀಗ ಇವರು ಮಾಡಿದ ಹೊಸ ಕಾಮಿಡಿ ರೀಲ್ 5 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ತಲುಪಿ ಹೊಸ ಸಂಚಲನವನ್ನು ಉಂಟುಮಾಡಿದೆ. ‘I am barbie girl’ ಎಂಬ ಪ್ರಸಿದ್ಧ ಇಂಗ್ಲಿಷ್ ಹಾಡಿನ ಟ್ಯೂನ್ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ. 2004ರಲ್ಲಿ ಸಣ್ಣ ಊರುಗಳಿಂದ ಐಟಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕಷ್ಟಪಟ್ಟ ಹುಡುಗಿಯರ ಜೀವನಶೈಲಿಯನ್ನು ಇದು ಹಿಡಿದಿಟ್ಟಿದೆ.
ಇದನ್ನೂ ಓದಿ : ‘ಎಮ್ಮಿಗೆ ತಾ ಭಾರತದಾಗ ಇದ್ದೀನಂತೂ ಗೊತ್ತಿಲ್ಲ, ಭಾರತಕ್ಕ ಸ್ವಾತಂತ್ರ್ಯ ಸಿಕ್ಕದಂತೂ ಗೊತ್ತಿಲ್ಲ’
ಒಂದು ದಿನದ ಹಿಂದೆ ಫೇಸ್ಬುಕ್ನಲ್ಲಿ ಮತ್ತು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ವಿಕಾಸ ಮತ್ತು ತಂಡದ ಸೃಜನಶೀಲತೆಯನ್ನು ಶ್ಲಾಘಿಸಿದ್ಧಾರೆ.
ನಾನು ನಂದಿನಿ ಬೆಂಗಳೂರಿಗೆ ಬಂದೀನಿ
View this post on Instagram
ಇಂಗ್ಲಿಷ್ ಹಾಡನ್ನು ಕನ್ನಡದಲ್ಲಿ ವಾಸ್ತವ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಇಂಗ್ಲಿಷ್ ಬಾರ್ಬಿ ಈ ಹಾಡನ್ನು ನೋಡಿದರೆ ಎದೆ ಒಡೆದುಕೊಂಡು ಸತ್ತು ಹೋಗುತ್ತಾಳೆ ಎಂದಿದ್ದಾರೆ ಇನ್ನೊಬ್ಬರು. ನೀವು ರಾಕಿಂಗ್, ನನ್ನ ಗಂಡ ವಿಕಿಪೀಡಿಯಾ ಶೈಲಿಯಲ್ಲಿ ಮಾತನಾಡಲು ಶುರುಮಾಡಿದ್ದಾರೆ. ನಾನು ನಿಮ್ಮ ಅಭಿಮಾನಿ ವಿಕಿ ಎಂದಿದ್ದಾರೆ ಮತ್ತೊಬ್ಬರು. ಇದು ನನ್ನ ಪಿಜಿ ದಿನಗಳ ಕಷ್ಟಗಳನ್ನು ನೆನಪಿಸಿತು. ನಾನು ಸಣ್ಣ ಊರಿನಿಂದ ಬಂದ ಹುಡುಗಿ. ಬೆಂಗಳೂರಂಥ ದೊಡ್ಡ ಪಟ್ಟಣಕ್ಕೆ ಬಂದು ಅನುಭವಿಸಿದ್ದೆಲ್ಲ ನೆನಪಾಯಿತು. ಆದರೆ ನಾನು ಯಾವತ್ತೂ ಮನೆಗೆ ಹಣ ಕಳಿಸುತ್ತಿರಲಿಲ್ಲ! ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:29 pm, Wed, 13 September 23