Viral News: ತನ್ನನ್ನು ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ ಯುವಕ; ಗೆದ್ದಿದ್ದು ಯಾರು ಗೊತ್ತಾ?

|

Updated on: Jul 05, 2024 | 8:33 PM

ಹಾವು ಮನುಷ್ಯನಿಗೆ ಕಚ್ಚುವುದು ಸಾಮಾನ್ಯ. ಆದರೆ, ಇದೀಗ ಹೊಸ ವಿಷಯವೊಂದು ಬೆಳಕಿಗೆ ಬಂದಿದೆ. ಬಿಹಾರದಲ್ಲಿ ಹಾವೊಂದು ಕಾರ್ಮಿಕನಿಗೆ 2 ಬಾರಿ ಕಚ್ಚಿದ್ದು, ಕೋಪಗೊಂಡ ವ್ಯಕ್ತಿ ಮತ್ತೆ ತಿರುಗಿ 3 ಬಾರಿ ಹಾವನ್ನು ಕಚ್ಚಿದ್ದಾನೆ.

Viral News: ತನ್ನನ್ನು ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ ಯುವಕ; ಗೆದ್ದಿದ್ದು ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಪಾಟ್ನಾ: ಬಿಹಾರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಆ ಮನುಷ್ಯನು ಹಾವನ್ನು ಕಚ್ಚಿದ್ದನು. ಈ ಕಚ್ಚಾಟದಲ್ಲಿ ಯಾರು ಗೆದ್ದರು ಎಂದು ನಿಮಗೆ ಊಹಿಸಲೂ ಸಾಧ್ಯವಿಲ್ಲ. ಆ ವ್ಯಕ್ತಿ ಕಚ್ಚಿದ್ದರಿಂದ ಹಾವು ಸಾವನ್ನಪ್ಪಿದೆ. ನವಾಡದ ರಾಜೌಲಿ ಪ್ರದೇಶದಲ್ಲಿ ಈ ವಿಚಿತ್ರವಾದ ಘಟನೆ ನಡೆದಿದೆ.

ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂತೋಷ್ ಲೋಹರ್ ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದಾಗ ಆತನಿಗೆ ವಿಷಕಾರಿ ಹಾವು ಕಚ್ಚಿತ್ತು. ಇದರಿಂದ ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್ ಕಬ್ಬಿಣದ ಸಲಾಕೆಯಿಂದ ಹಾವನ್ನು ಹಿಡಿದು ಹೊಡೆದಿದ್ದಾನೆ. ನಂತರ ಕೋಪದಿಂದ ಒಂದಲ್ಲ 3 ಬಾರಿ ಕಚ್ಚಿ, ಆ ಹಾವನ್ನು ಕೊಂದು ಹಾಕಿದ್ದಾನೆ.

ಇದನ್ನೂ ಓದಿ: ಕಸದ ತೊಟ್ಟಿಯಲ್ಲಿತ್ತು ದೇಹದ ತುಂಡುಗಳು; ಕೊಲೆ ರಹಸ್ಯದ ಸುಳಿವು ನೀಡಿತ್ತು ಕಪ್ಪು ಮೀಸೆ!

ಈ ಬಗ್ಗೆ ಪ್ರತಿಕ್ರಿಯೆಯ ಕುರಿತು ಕೇಳಿದಾಗ ಹಾವಿನಿಂದ ಕಚ್ಚಿಸಿಕೊಂಡ ಸಂತೋಷ್ ವಿವರಿಸಿದ್ದಾರೆ. “ನನ್ನ ಹಳ್ಳಿಯಲ್ಲಿ ನಿಮಗೆ ಹಾವು ಕಚ್ಚಿದರೆ, ಆ ವಿಷವನ್ನು ತೆಗೆದುಹಾಕಲು ನೀವು ಅದಕ್ಕೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ, ನಾನು ಆ ಹಾವಿಗೆ ಕಚ್ಚಿದೆ” ಎಂದು ಹೇಳಿದ್ದಾರೆ.

ಈ ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಅಸಾಮಾನ್ಯ ಘಟನೆಯ ಸುದ್ದಿ ಎಲ್ಲೆಡೆ ಬೇಗ ಹರಡಿತು. ಸಂತೋಷ್‌ನ ಕಥೆಯನ್ನು ಕೇಳಲು ಜನಸಮೂಹ ಆಸ್ಪತ್ರೆಯಲ್ಲಿ ಜಮಾಯಿಸಿತು.

ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್

ಜಾರ್ಖಂಡ್ ಮೂಲದ ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ