
ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯು ರಾಜ್ಯಾದ್ಯಂತ ಅಸ್ಥವ್ಯಸ್ಥ ಉಂಟು ಮಾಡಿದೆ. ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಭಾರೀ ಮಳೆಯ ನಡುವೆ ಗೌಲಾ ನದಿಯಲ್ಲಿ ಆನೆಯೊಂದು ಸಿಲುಕಿಕೊಂಡಿತ್ತು. ಪ್ರವಾಹದ ಮಧ್ಯೆ ದಾರಿ ತೋಚದೇ ಪರದಾಡುತ್ತಿತ್ತು. ಉಕ್ಕಿ ಹರಿಯುತ್ತಿರುವ ಗೌಲಾ ನದಿಯಲ್ಲಿ ಆನೆ ಸಿಲುಕಿಕೊಂಡಿರುವ ದೃಶ್ಯವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ತಡ ಮಾಡದೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೋವನ್ನು ಹರಿಬಿಟ್ಟ ಟ್ವಿಟರ್ ಬಳಕೆದಾರ ಅಭಿಷೇಕ್ ಪಾಂಡೆ ಹೀಗೆ ಬರೆದಿದ್ದಾರೆ. ಉಕ್ಕುತ್ತಿರುವ ಗೌಲಾ ನದಿಯಲ್ಲಿ ಆನೆಯೊಂದು ಸಿಲುಕಿಕೊಂಡಿದೆ. ಅರಣ್ಯ ಇಲಾಖೆಯ ತಂಡ ಆನೆಯನ್ನು ರಕ್ಷಿಸಿದ್ದಾರೆ. ಕಾಡಿಗೆ ಮರಳಿ ಸೇರುವಂತೆ ದಾರಿ ತೋರಿಸಿದ್ದಾರೆ ಎಂದು ಬರೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಆನೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಕ್ಕಾಗಿ ಅರಣ್ಯ ಇಲಾಖೆಗೆ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ, ಆನೆ ರಕ್ಷಿಸಲು ಮುಂದಾದ ಸಿಬ್ಬಂದಿ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಾಗೀಯ ಅರಣ್ಯ ಅಧಿಕಾರಿ ಸಂದೀಪ್ ಕುಮಾರ್ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ನದಿಯ ಮಧ್ಯೆ ಆನೆ ಸಿಲುಕಿಕೊಂಡಿರುವಂತೆ ಮಾಹಿತಿ ಸಿಕ್ಕಿತು. ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಳುಹಿಸಿ ಆನೆಯನ್ನು ರಕ್ಷಣೆ ಮಾಡಲಾಗಿದೆ. ಆನೆಯ ಚಲನವಲನದ ಬಗ್ಗೆ ನಿಗಾ ಇಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರವಾಹದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತ ಹವಾಮಾನ ಇಲಾಖೆ ಉತ್ತರಾಖಂಡಕ್ಕೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹೇಳಿದೆ.
ಇದನ್ನೂ ಓದಿ:
Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್ ಆಯ್ತು ವಿಡಿಯೊ
Published On - 8:18 am, Wed, 20 October 21