ಬಾಲ್ಯದ ಮಧುರ ಸಂಗಾತಿ ‘ಚಿಕ್ಕಿ’ಗೆ ಈ ಗತಿ ಕಾಣಿಸಿದ ವ್ಯಕ್ತಿಗೆ ಗರುಡ ಪುರಾಣದಲ್ಲಿ ಯಾವ ಶಿಕ್ಷೆ ಕಾದಿದೆ?

| Updated By: ಶ್ರೀದೇವಿ ಕಳಸದ

Updated on: Jan 17, 2023 | 5:34 PM

Chikki : ರಸ್ತೆಬದಿಯ ತಿಂಡಿ ವ್ಯಾಪಾರಿಯೊಬ್ಬರು ಮಸಾಲಾ ಚಿಕ್ಕಿ ಚಾಟ್​ ಎಂಬ ಹೊಸ ಚಾಟ್​ನ ಅನ್ವೇಷಣೆ ಮಾಡಿದ್ದಾರೆ. ಕೋಪಗೊಂಡ ನೆಟ್ಟಿಗರು ಈ ವ್ಯಾಪಾರಿಯನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕಾದಿದೆ ಎನ್ನುತ್ತಿದ್ದಾರೆ!

ಬಾಲ್ಯದ ಮಧುರ ಸಂಗಾತಿ ‘ಚಿಕ್ಕಿ’ಗೆ ಈ ಗತಿ ಕಾಣಿಸಿದ ವ್ಯಕ್ತಿಗೆ ಗರುಡ ಪುರಾಣದಲ್ಲಿ ಯಾವ ಶಿಕ್ಷೆ ಕಾದಿದೆ?
ಮಸಾಲಾ ಚಿಕ್ಕಿ ಚಾಟ್​
Follow us on

Viral Video : ಹುರಿದ ಶೇಂಗಾ ಸಿಪ್ಪೆ ಬಿಚ್ಚಿಕೊಂಡು ತನ್ನನ್ನು ಇಬ್ಭಾಗವಾಗಿಸಿಕೊಂಡು ಬೆಲ್ಲದ ಪಾಕದಲ್ಲಿ ಹದವಾಗಿ ಮಿಳಿತಗೊಳಿಸಿಕೊಂಡು ಚಿಕ್ಕಿ ಎಂಬ ಸಿಹಿ ಪದಾರ್ಥವಾಗುವುದಿದೆಯಲ್ಲ. ಮತ್ತದು ಅಂಗಡಿಗಳ ಗಾಜಿನಬಾಟಲಿಗಳಲ್ಲಿ ಅಚ್ಚುಕಟ್ಟಾಗಿ ನಮಗಾಗಿ ಕಾಯುತ್ತ ಕುಳಿತುಕೊಳ್ಳುವುದಿದೆಯಲ್ಲ. ಮತ್ತದನ್ನು ನಾಕಾಣೆ, ಎಂಟಾಣೆ, ಒಂದುರೂಪಾಯಿ ಕೊಟ್ಟು ಜೇಬಿಗಿಳಿಸಿಕೊಳ್ಳುವ ನಮ್ಮ ಖುಷಿ ಇದೆಯಲ್ಲ. ಅಕಸ್ಮಾತ್ ಆಗಿ ಜೇಬಿಗೆ ಇರುವೆಗಳು ಸಾಲುಗಟ್ಟಿದಾಗ ನಾವು ತಳಮಳಗೊಳ್ಳುವುದಿದೆಯಲ್ಲ. ಬರೆಯುತ್ತ, ಓದುತ್ತ ಈಗಿದನ್ನು ಮತ್ತೆ ಮತ್ತೆ ತಿನ್ನಬೇಕೆಂದು ಉಂಟಾಗುವ ಆಸೆ ಇದೆಯಲ್ಲ… ಈ ಆಸೆಗೆ ದೊಡ್ಡ ಕಲ್ಲು ಹಾಕುವಂತೆ ಈ ಪೋಸ್ಟ್​ ವೈರಲ್ ಆಗುತ್ತಿದೆ!

ಭಾರತದಲ್ಲಿ ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ, ಚಾಟ್​ ತಿನ್ನದೇ ಗತ್ಯಂತರವೇ ಇಲ್ಲ ಎಂಬಂತಾಗುತ್ತದೆ. ಅದರಲ್ಲೂ ಕಡಲೇಬೀಜ ಅಥವಾ ಶೇಂಗಾದಿಂದ ಮಿಶ್ರಣಗೊಂಡ ತಿಂಡಿತಿನಿಸುಗಳು ಬೇಕು ಎನ್ನಿಸುತ್ತವೆ. ಹೊರಗೆ ಹೋಗಲಾಗಿದ್ದರೆ ಮನೆಯಲ್ಲಿಯೇ ಮಾಡಿದ ಸಿಹಿಯಾದ ಕುರುಂಕುರುಂ ಎನ್ನುವ ಚಿಕ್ಕಿಗಳು ನಮ್ಮ ನಾಲಗೆಯನ್ನು ಆಳುತ್ತವೆ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಏಕೆಂದರೆ ರುಚಿ ಎನ್ನುವುದು ನೆನಪಿಗೆ ಸಂಬಂಧಿಸಿದ್ದು. ನಿರ್ದಿಷ್ಟ ಪದಾರ್ಥಕ್ಕೆ ಅದರದೇ ಆದ ಸ್ವಾದವಿರುತ್ತದೆ. ಅದನ್ನು ನಮ್ಮ ನಾಲಗೆ, ಮೆದುಳು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ಈ ಮಸಾಲಾ ಚಿಕ್ಕಿ ಚಾಟ್​ ಈ ನೆನಪನ್ನೆಲ್ಲ ಕಲಸುಮೇಲೋಗರ ಮಾಡುವಂತಿದೆ.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ರಸ್ತೆಬದಿಯ ತಿಂಡಿ ವ್ಯಾಪಾರಿಗಳೊಬ್ಬರು ಈ ಮಸಾಲಾ ಚಿಕ್ಕಿ ಚಾಟ್​ ಎಂದು ಹೊಸ ಚಾಟ್​ನ ಅನ್ವೇಷಣೆ ಮಾಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಅಸಂತುಷ್ಟಗೊಂಡಿದ್ದಾರೆ. ಏನಾಗುತ್ತಿದೆ ರಸ್ತೆಬದಿ ತಿಂಡಿ ತಯಾರಿಸುವ ಈ ಮಂದಿಗೆ. ಆಗಾಗ ಹೀಗೆ ಯಾವುದ್ಯಾವುದಕ್ಕೋ ಏನೇನೋ ಬೆರೆಸಿ ವಿಚಿತ್ರವಾದ ತಿಂಡಿಗಳನ್ನು ಮಾಡುತ್ತಿರುತ್ತಾರೆ. ಆಯಾ ತಿಂಡಿಗಳ ಮೂಲ ಸ್ವಾದವನ್ನೇ ಹದಗೆಡಿಸುತ್ತಿರುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಆಹಾರಕ್ಕಿರುವ ಮೂಲಸ್ವಾದವನ್ನು ದಯವಿಟ್ಟು ಗೌರವಿಸಿ. ಅಪ್ಪಿತಪ್ಪಿಯೂ ಮನೆಯಲ್ಲಿ ಕೂಡ ಯಾರೂ ಇಂಥ ಪಾಕಸಾಹಸಗಳನ್ನು ಪ್ರದರ್ಶಿಸಲು ಹೋಗಬೇಡಿ ಎಂದಿದ್ದಾರೆ ಅನೇಕರು. ಈ ವಿಡಿಯೋ ಮಾಡುವಾಗಲೂ ನಿಮಗೆ ಮುಜುಗರವೆನ್ನಿಸಲಿಲ್ಲವೆ ಎಂದು ಫುಡ್​ ಬ್ಲಾಗರ್ ಶ್ರುತಿ ಅವರಿಗೆ ಕೆಲವರು ಕೇಳಿದ್ದಾರೆ. ಗರುಡಪುರಾಣದಲ್ಲಿ ಈ ವ್ಯಕ್ತಿಗೆ ಮಾತ್ರ ಬೇರೆ ತರಹದ ಶಿಕ್ಷೆ ಬರೆಯಲಾಗುತ್ತದೆ ಎಂದಿದ್ಧಾರೆ ಒಬ್ಬರು!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 5:32 pm, Tue, 17 January 23