‘ಜಾಮೂನು ಒಯ್ಯುವಂತಿಲ್ಲ’ ವಿಮಾನ ನಿಲ್ದಾಣದಲ್ಲಿ ತಡೆದಾಗ ಇಂಥ ಚೆಂದದ ವಾತಾವರಣ ಸೃಷ್ಟಿಯಾಯಿತು
Airport : ‘ಕಸದಬುಟ್ಟಿಗೆ ಎಸೆಯಿರಿ’ ಭಾರತೀಯ ಪ್ರಯಾಣಿಕ ಹಿಮಾಂಶು ಅವರಿಗೆ ಎಸೆಯಲು ಮನಸ್ಸು ಬರಲಿಲ್ಲ. ಬದಲಾಗಿ ಅಲ್ಲಿದ್ದ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಹಂಚಿಬಿಟ್ಟರು. ಇದ್ದಲ್ಲೇ ದಸರಾ!
Viral Video : ಜಾಮೂನನ್ನು ವಿಮಾನಯಾನದಲ್ಲಿ ನಿಷೇಧಿಸಲಾಗಿದೆ ಎಂದು ವಿಮಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರೊಬ್ಬರಿಗೆ ಹೇಳಿದಾಗ ಅವರು ಬೇಜಾರು ಮಾಡಿಕೊಳ್ಳುವುದರ ಬದಲಾಗಿ ಎಲ್ಲರನ್ನೂ ಖುಷಿಗೊಳಿಸುವ ವಿಧಾನವನ್ನು ಕಂಡುಕೊಂಡರು. ಆ ವಿಡಿಯೋ ಇದೀಗ ವೈರಲ್ ಆಗಿದೆ. 1.1 ಮಿಲಿಯನ್ ಜನರು ವಿಡಿಯೋ ನೋಡಿದ್ದು, 60,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಿಹಿ ಮತ್ತು ತಿಂಡಿ ತಿನಿಸುಗಳು ಪರಸ್ಪರ ಬಂಧಗಳನ್ನು ಬೆಸೆದು, ಸ್ನೇಹಮಯಿ ವಾತಾವರಣ ಸೃಷ್ಟಿಸುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
View this post on Instagram
ಬಸ್ಸು, ಕಾರು, ರೈಲು, ವಿಮಾನ ಹೀಗೆ ಯಾವುದರ ಮೂಲಕ ಪ್ರಯಾಣಿಸಿದರೂ ನಮ್ಮ ಬಳಿ ತಿಂಡಿತಿನಿಸುಗಳು ಇದ್ದೇ ಇರುತ್ತವೆ. ಅದು ನಮಗೋ ಅಥವಾ ನಾವು ತಲುಪಲಿರುವ ಊರಿನಲ್ಲಿ ವಾಸಿಸುತ್ತಿರುವ ಸಂಬಂಧಿಕರೋ ಸ್ನೇಹಿತರಿಗೋ. ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ಮಾತ್ರ ಮನಸಿಗೆ ಬಂದಿದ್ದೆಲ್ಲವನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಸುರಕ್ಷತೆಯ ಕಾರಣಕ್ಕಾಗಿ ಮತ್ತು ವಾಣಿಜ್ಯ ಕಾರಣಕ್ಕಾಗಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾದುದು ಅವಶ್ಯ. ಹಾಗಾಗಿ ವಿಮಾನ ಸಂಸ್ಥೆಯ ಸಿಬ್ಬಂದಿಯು ಬ್ಯಾಗ್ ಚೆಕ್ ಮಾಡಿಯೇ ಪ್ರಯಾಣಿಕರನ್ನು ಒಳಬಿಡುವುದು. ನಿಯಮಕ್ಕೆ ವಿರುದ್ಧವಾದ ವಸ್ತುಗಳು ಬ್ಯಾಗಿನಲ್ಲಿದ್ದರೆ ಮುಲಾಜಿಲ್ಲದೆ ಕಸದಬುಟ್ಟಿಗೆ ಎಸೆಯಲು ಸಿಬ್ಬಂದಿ ಹೇಳುತ್ತದೆ. ಎಂಥ ಸಂಕಟದ ವಿಷಯ ಇದಲ್ಲವೆ?
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯ ಹಿಮಾಂಶು ದೇವಗನ್ ಗುಲಾಬ್ ಜಾಮೂನು ಡಬ್ಬಿಯನ್ನು ತೆಗೆದುಕೊಂಡು ಫುಕೆಟ್ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ತಡೆದು ಜಾಮೂನಿನ ಡಬ್ಬಿಯನ್ನು ಎಸೆಯಬೇಕೆಂದು ಕೇಳಿಕೊಂಡಿದೆ. ಆದರೆ ಅದಕ್ಕೊಪ್ಪದ ಹಿಮಾಂಶು ಕ್ಷಣದಲ್ಲಿ ಯೋಚಿಸಿ, ಅಲ್ಲಿಯ ಸಿಬ್ಬಂದಿಗೆ ಎಲ್ಲ ಜಾಮೂನುಗಳನ್ನು ಹಂಚಿಬಿಟ್ಟಿರು.
ನಿತ್ಯದ ಕೆಲಸದಲ್ಲಿ ಮುಳುಗಿದ್ದ ಸಿಬ್ಬಂದಿಯು ಜಾಮೂನು ತಿಂದ ನಂತರ ಮತ್ತಷ್ಟು ಉತ್ಸುಕರಾಗಿ ಕೆಲಸ ಮಾಡಲಾರಂಭಿಸಿದರು. ಹೀಗೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಆಹಾರಕ್ಕೆ ಇದೆ ಎನ್ನುವ ಸಂದೇಶವನ್ನು ಸಾರುವ ಈ ವಿಡಿಯೋ ನೋಡಿದ ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯಿಸಿದ್ಧಾರೆ.
‘ಜಾಮೂನುಗಳನ್ನು ತೆಗೆದುಕೊಂಡು ಹೋಗಲು ಬಿಡದಿದ್ದುದಕ್ಕೆ ಈ ಸಿಹಿಯಾದ ಶಿಕ್ಷೆ!’ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ‘ಇದು ಭಾವಪೂರ್ಣ ಮತ್ತು ಅದ್ಭುತ ವಿಡಿಯೋ’ ಎಂದಿದ್ಧಾರೆ ಮತ್ತೊಬ್ಬರು. ‘ಸಿಬ್ಬಂದಿ ಕೂಡ ಎಷ್ಟೊಂದು ಸ್ವೀಟ್’ ಎಂದಿದ್ದಾರೆ ಮಗದೊಬ್ಬರು. ‘ಕಸಕ್ಕೆ ಸೇರುವ ಬದಲಿಗೆ ಹೀಗೆ ಖುಷಿಯನ್ನು ಹಂಚಿತ್ತಲ್ಲ’ ಎಂದಿದ್ದಾರೆ ಇನ್ನೂ ಒಬ್ಬರು.
ಮುಕ್ತವಾಗಿ ಯೋಚಿಸಲು ಕಲಿತಾಗ ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ. ಒಂದು ಆಲೋಚನೆ ಪರಿಸ್ಥಿತಿಯನ್ನು ಎಷ್ಟು ಚೆಂದ ತಿಳಿ ಮಾಡಿತಲ್ಲವೆ. ಖುಷಿ ಮತ್ತು ಪ್ರೀತಿ ಕೊಟ್ಟು ಪಡೆಯುವಂಥವು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:00 pm, Tue, 4 October 22