ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಬೂಟುಗಾಲಿನಿಂದ ಮುಖಕ್ಕೆ ಒದ್ದ ಟಿಕೆಟ್ ಕಲೆಕ್ಟರುಗಳ ಅಮಾನತು
Viral Video : ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಮಾತ್ರಕ್ಕೆ ಟಿಕೆಟ್ ಕಲೆಕ್ಟರ್ಗಳು ಹೀಗೆಲ್ಲ ಥಳಿಸಬಾರದಿತ್ತು ಎಂದು ಅಲ್ಲಿದ್ದ ಪ್ರಯಾಣಿಕರು ಹೇಳಿದ್ದಾರೆ. ಅಮಾನವೀಯವೆನ್ನಿಸುವ ಈ ವಿಡಿಯೋ ಇದೀಗ ವೈರಲ್ ಆಗಿದೆ.

Viral Video : ಬಿಹಾರದ ಮುಜಾಫರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಟಿಕೆಟ್ ಕಲೆಕ್ಟರ್ ಥಳಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದುದೇ ಇದಕ್ಕೆ ಕಾರಣವಾಗಿದೆ. ಪ್ರಯಾಣಿಕ ಮತ್ತು ಟಿಕೆಟ್ ಕಲೆಕ್ಟರ್ ಮಧ್ಯೆ ಜಗಳ ಶುರುವಾಗಿ ನಂತರ ಅದು ಪರಸ್ಪರ ಹೊಡೆದಾಟಕ್ಕೆ ತಿರುಗಿದೆ. ಪರಿಣಾಮವಾಗಿ ಟಿಕೆಟ್ ಕಲೆಕ್ಟರ್ನನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರೊಬ್ಬರು ಈ ವಿಡಿಯೋ ಮಾಡಿದ್ದಾರೆ.
ಟಿಕೆಟ್ ಕಲೆಕ್ಟರ್ ಪ್ರಯಾಣಿಕನ ಕಾಲನ್ನು ಹಿಡಿದು ಬರ್ತ್ನಿಂದ ಕೆಳಗಿಳಿಸಲು ಪ್ರಯತ್ನಿಸುವಾಗ ಪ್ರಯಾಣಿಕ ಕಲೆಕ್ಟರ್ನನ್ನು ಒದೆಯುತ್ತಾನೆ. ಆಗ ಕಲೆಕ್ಟರ್ ಇನ್ನೊಬ್ಬ ಸಹೋದ್ಯೋಗಿಯೊಂದಿಗೆ ಜೊತೆಗೂಡಿ ಈ ಪ್ರಯಾಣಿಕನನ್ನು ನೆಲಕ್ಕುರುಳಿಸಿ ಹೊಡೆಯುತ್ತಾರೆ. ಬೂಟುಗಾಲಿನಲ್ಲಿ ಮುಖಕ್ಕೆ ಒದೆಯುತ್ತಾರೆ. ನಂತರ ಪ್ರಯಾಣಿಕರು ಮಧ್ಯೆ ಪ್ರವೇಶಿಸಿ ಈ ಹೊಡೆದಾಟವನ್ನು ನಿಲ್ಲಿಸುತ್ತಾರೆ.
ಇದನ್ನೂ ಓದಿ : ಪಾರ್ಕಿನ್ಸನ್ಸ್ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್
ಜನವರಿ 2 ರ ರಾತ್ರಿ ಮುಂಬೈನಿಂದ ಜೈನಗರಕ್ಕೆ ಹೊರಟಾಗ ಧೋಲಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ ಈ ಸಂದರ್ಭ ಸೃಷ್ಟಿಯಾಗಿದ್ದರೂ ಹೀಗೆ ಹಲ್ಲೆ ಮಾಡಬಾರದಿತ್ತು ಎನ್ನುವುದು ಘಟನೆಗೆ ಸಾಕ್ಷಿಯಾದ ಅನೇಕರ ಅಭಿಪ್ರಾಯವಾಗಿದೆ. ಅಮಾನತುಗೊಂಡ ಇಬ್ಬರೂ ಟಿಕೆಟ್ ಕಲೆಕ್ಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ