
ಬೀದಿಯ ಒಂದು ಮನೆಯಲ್ಲಿ ಮದುವೆ, ಇನ್ನೊಂದು ಮನೆಯಲ್ಲಿ ಸೂತಕ, ಎದುರು ಬದುರು ಮನೆಯಲ್ಲಿ ಇಂತಹ ಸಂಗತಿಗಳು ನಡೆಯುವುದು ಅಪರೂಪ. ಒಂದು ವೇಳೆ ಹೀಗೆ ನಡೆದರೂ ಮದುವೆ ಮನೆ ಕೂಡ ಮೌನವಾಗಿರುತ್ತದೆ. ಏಕೆಂದರೆ ಒಂದು ಮನೆಯಲ್ಲಿ ಸಾವು ಸಂಭವಿಸಿರುವಾಗ ಮದುವೆ ಸಂಭ್ರಮ ಮಾಡಲು ಹೇಗೆ ಸಾಧ್ಯ. ವಿಶೇಷವಾಗಿ ಭಾರತೀಯ ವಿವಾಹ (Indian weddings) ತುಂಬಾ ಸುಂದರವಾಗಿರುತ್ತದೆ. ಹಾಡು, ಕುಣಿತ, ಎಲ್ಲದಕ್ಕೂ ಮೊದಲೇ ತಯಾರಿ ಮಾಡಿಕೊಂಡಿರುತ್ತಾರೆ. ಆದರೆ ಎದುರು ಮನೆಯಲ್ಲಿ ಸಾವು ಸಂಭವಿಸಿದರೆ, ಈ ಎಲ್ಲಾ ಸಂಭ್ರಮಕ್ಕೆ ಖಂಡಿತ ತಡೆಯಾಗುತ್ತದೆ. ಮಲೇಷ್ಯಾದ ನೆಗೇರಿ ಸೆಂಬಿಲಾನ್ ರಾಜ್ಯದ ಟ್ಯಾಂಪಿನ್ ಪಟ್ಟಣದಲ್ಲಿಯೂ ಸಹ ಜುಲೈ 5 ರಂದು ಒಂದೇ ಬೀದಿಯಲ್ಲಿ ಇಂತಹ ಒಂದು ಅನಿರೀಕ್ಷಿತ ಘಟನೆ ನಡೆದಿದೆ.
ಒಂದು ಕಡೆ ಭಾರತೀಯ ಕುಟುಂಬದ ಮದುವೆ, ಇನ್ನೊಂದು ಮನೆಯಲ್ಲಿ ಚೀನೀ ವ್ಯಕ್ತಿಯ ಸಾವು. ಈ ಎರಡನ್ನೂ ಕುಟುಂಬಗಳು ಹೇಗೆ ನಿಭಾಯಿಸಿದೆ ಎಂದರೆ, ಇದು ನಿಜಕ್ಕೂ ಗೌರವ ಮತ್ತು ಏಕತೆಯ ಪ್ರತೀಕವಾಗಿದೆ ಅಂತಾನೇ ಹೇಳಬಹುದು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ , ಚೀನಾ ಮೂಲದ ಸ್ಥಳೀಯ ಡೆಮಾಕ್ರಟಿಕ್ ಆಕ್ಷನ್ ಪಕ್ಷದ ರಾಜಕಾರಣಿಯೊಬ್ಬರ ತಾಯಿ ಸಾವನ್ನಪ್ಪಿದ್ದರು. ರಸ್ತೆಯ ಇನ್ನೊಂದು ಬದಿಯಲ್ಲಿ, ಭಾರತೀಯ ಕುಟುಂಬವೊಂದು ವಿವಾಹ ಸಂಭ್ರಮದಲ್ಲಿ ತೊಡಗಿತ್ತು. ಎರಡು ಕುಟುಂಬ ಎಲ್ಲೂ ಕೂಡ ಒಂದು ಚೂರು ಕಿರಿಕ್ ಮಾಡಿಕೊಂಡಿಲ್ಲ. ಎರಡೂ ಕುಟುಂಬಗಳು ಈ ಸೂಕ್ಷ್ಮ ಸಂದರ್ಭದಲ್ಲಿ ತುಂಬಾ ಸಮಾಧಾನದಿಂದ ವರ್ತಿಸಿವೆ.
ಈ ಚೀನೀ ರಾಜಕಾರಣಿ ತನ್ನ ತಾಯಿ ಸಾವನ್ನಪ್ಪಿದ ದುಃಖದ ನಡುವೆಯೂ ಮದುವೆ ಮನೆಯ ಸಂತೋಷಕ್ಕೆ ಭಂಗ ತಂದಿಲ್ಲ. ತಾಯಿ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರನ್ನು ಸಂತೋಷದಿಂದ ಕಳುಹಿಸುವೆ ಎಂದು ಹೇಳಿದ್ದಾರೆ. ಮದುವೆ ಇರುವ ಕಾರಣ ನಮ್ಮ ಮನೆಯಲ್ಲಿ ಸಂಜೆ ತಾಯಿಯ ಯಾವ ಕಾರ್ಯವನ್ನು ಮಾಡುವುದಿಲ್ಲ. ಆದ್ದರಿಂದ ಅವರು ತಮ್ಮ ಆಚರಣೆಯನ್ನು ಮುಂದುವರಿಸಬಹುದು ಎಂದು ಭಾರತೀಯ ಕುಟುಂಬಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಾವಿನ ಹಣ್ಣಿನ ಟ್ರಕ್ ಪಲ್ಟಿ; ಚಾಲಕನ ಸಹಾಯಕ್ಕೂ ಬಾರದೆ ಹಣ್ಣು ಹೆಕ್ಕುವುದರಲ್ಲಿ ಬ್ಯುಸಿಯಾದ ಜನ
ಇನ್ನು ಈ ರಾಜಕಾರಣಿ ಹೇಳಿದ ಮಾತಿಗೆ ಭಾರತೀಯ ಕುಟುಂಬ ಮನಸೋತು, ನಾವು ಯಾವುದೇ ಸಂಗೀತ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ಎಂದು ಹೇಳಿದೆ. ಜತೆಗೆ ಮದುವೆಗೆ ಬರುವ ಅತಿಥಿಗಳನ್ನು ಅಂತ್ಯಕ್ರಿಯೆಯ ಪ್ರದೇಶದಿಂದ ತಮ್ಮ ವಾಹನಗಳನ್ನು ದೂರದಲ್ಲಿ ನಿಲ್ಲಿಸುವಂತೆ ಕೇಳಿಕೊಂಡಿದೆ. ಇದೀಗ ಈ ಒಂದು ಘಟನೆ ವೈರಲ್ ಆಗಿದ್ದು, ಸಂಸ್ಕೃತಿ, ಆಚರಣೆಗೂ ಮೀರಿದ ಕ್ಷಣ ಇದು ಎಂದು ಹೇಳಿದ್ದಾರೆ. ಅನೇಕರು ಮರಣವಾದ ಮನೆಯ ಮುಂದೆ ಮದುವೆಯಂತಹ ಸಮಾರಂಭಗಳನ್ನು ಮಾಡುವುದಿಲ್ಲ, ಆದರೆ ಈ ಘಟನೆ ಎಲ್ಲರಿಗೂ ಮಾದರಿಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ