ಮದುವೆ ಆಗುತ್ತಿರುವ ಖುಷಿಗೆ ಸ್ನೇಹಿತರ ಜತೆ ಸೇರಿ ಕಂಠಪೂರ್ತಿ ಕುಡಿದ ವರ; ಈ ಸಂಬಂಧವೇ ಬೇಡ ಎಂದು ವಿವಾಹ ನಿಲ್ಲಿಸಿದ ವಧು
Viral News: ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ.
ಲಕ್ನೋ: ಮದುವೆಯ ಸಂಭ್ರಮದಲ್ಲಿ ಮೈಮರೆತ ವರ ತನ್ನ ಸ್ನೇಹಿತರ ಜತೆ ಸೇರಿ ಮದ್ಯಪಾನ ಮಾಡಿದ ಪರಿಣಾಮ ಆತನ ವಿವಾಹವೇ ರದ್ದಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ವಿವಾಹ ಸಮಾರಂಭದ ಸಂದರ್ಭದಲ್ಲಿ ವರ ಕಂಠಪೂರ್ತಿ ಕುಡಿದಿದ್ದನ್ನು ಕಂಡ ಯುವತಿ ತನಗೆ ಈ ಮದುವೆಯೇ ಬೇಡವೆಂದು ನಿರಾಕರಿಸಿದ್ದು, ಸಕಲ ಸಂಧಾನ ಪ್ರಯತ್ನಗಳ ನಂತರವೂ ಮನವೊಲಿಸುವುದು ಸಾಧ್ಯವಾಗದಿದ್ದಾಗ ಅಂತಿಮವಾಗಿ ವಿವಾಹವನ್ನೇ ರದ್ದುಪಡಿಸಲಾಗಿದೆ.
ಪ್ರಯಾಗ್ರಾಜ್ನ ಪ್ರತಾಪ್ಘರ್ ಬಳಿಯ ಟಿಕ್ರಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ ಬೇಸರವಾಗಿ ವಿವಾಹ ನಿಂತುಹೋದ ಕಾರಣ ಎರಡೂ ಕುಟುಂಬಗಳ ಮಧ್ಯೆ ಒಂದಷ್ಟು ಗೊಂದಲಗಳು ಮೂಡಿ ಮನಸ್ತಾಪಕ್ಕೆ ಕಾರಣವಾಗಿದೆ. ವರ ಮತ್ತು ಆತನ ಸ್ನೇಹಿತರು ಮದ್ಯದ ಅಮಲಿನೊಂದಿಗೆ ತೋರಿದ ವರ್ತನೆಯೇ ಯುವತಿ ವಿವಾಹದ ದಿನ ಈ ನಿರ್ಧಾರಕ್ಕೆ ಬರಲು ಕಾರಣ ಹೀಗಾಗಿ ವರನ ಕುಟುಂಬಸ್ಥರು ಆ ಮೊದಲು ಪಡೆದಿದ್ದ ಉಡುಗೊರೆ ಹಾಗೂ ಇನ್ನಿತರ ವಸ್ತುಗಳನ್ನು ಹಿಂತಿರುಗಿಸಬೇಕೆಂದು ಯುವತಿಯ ಮನೆಯವರು ಪಟ್ಟುಹಿಡಿದಿದ್ದಾರೆ.
22 ವರ್ಷದ ಯುವತಿಯ ತಂದೆ ಟಿಕ್ರಿ ಗ್ರಾಮದಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದು, ಮಗಳ ಮದುವೆಯನ್ನು ಚೆನ್ನಾಗಿ ಮಾಡಕೊಡಬೇಕೆಂದು ನಿರ್ಧರಿಸಿದ್ದರು. ಆದರೆ, ವರ ಮತ್ತು ಆತನ ಸ್ನೇಹಿತರು ಮದ್ಯಪಾನ ಮಾಡಿಕೊಂಡು ಬಂದ ಸಂಗತಿ ಅರಿವಿಗೆ ಬರುತ್ತಿದ್ದಂತೆಯೇ ಪರಿಸ್ಥಿತಿ ಬದಲಾಗತೊಡಗಿದೆ. ಮೊದಮೊದಲು ವಧುವಿನ ಕಡೆಯವರು ಮದುಮಗ ಹಾಗೂ ಆತನ ಸ್ನೇಹಿತರ ವರ್ತನೆಯನ್ನು ಕಡೆಗಣಿಸಲೆತ್ನಿಸಿದರಾದರೂ ಕೊನೆಗೆ ಅದು ಮಿತಿಮೀರುತ್ತಿದೆ ಎಂದಾದಾಗ ಯುವತಿಯೇ ಧ್ವನಿ ಎತ್ತಿದ್ದಾಳೆ.
ಮದ್ಯದ ಅಮಲು ತಲೆಗೇರಿದ್ದ ಕಾರಣ ಸಮಾರಂಭದ ಆರಂಭದಿಂದಲೂ ವರ ಕಿರಿಕಿರಿ ಮಾಡಿದ್ದಾನೆ. ಆದರೆ, ಯುವತಿ ಅದೆಲ್ಲವನ್ನೂ ಕೆಲ ಹೊತ್ತು ಸಹಿಸಿಕೊಂಡಿದ್ದಳು. ಅಷ್ಟಾದ ನಂತರವೂ ಎಲ್ಲರೆದುರು ಕುಣಿಯಬೇಕೆಂದು ವರ ಪಟ್ಟು ಹಿಡಿದಾಗ ಆಕೆ ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾಳೆ. ತನನ್ನು ಮದುವೆಯಾಗುತ್ತಿರುವವಳು ಮಾತು ಕೇಳುತ್ತಿಲ್ಲವೆಂದು ಅಸಮಾಧಾನಗೊಂಡ ವರ ಸ್ಥಳದಲ್ಲೇ ಗಲಾಟೆ ಶುರು ಮಾಡಿದ್ದಾನೆ. ಆತನ ವರ್ತನೆಯಿಂದ ಬೇಸತ್ತ ಯುವತಿ ಈ ಮದುವೆಯೇ ಬೇಡವೆಂದು ತಿರಸ್ಕರಿಸಿ ಸಂಬಂಧ ಕಡಿದುಕೊಂಡಿದ್ದಾಳೆ.
ಘಟನೆಯ ಸಂಬಂಧ ಸ್ಥಳೀಯ ಪೊಲೀಸರನ್ನು ಕರೆಯಿಸಿ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದರೂ ಯುವತಿ ಪಟ್ಟು ಸಡಿಲಿಸಿಲ್ಲ. ಕೊನೆಗೆ ಬೇರೆ ದಾರಿ ಕಾಣದೇ ಎರಡೂ ಕುಟುಂಬದವರು ವಿವಾಹ ರದ್ದುಪಡಿಸಲು ಸಮ್ಮತಿಸಿದ್ದು, ಯುವತಿಯ ಪೋಷಕರಿಗೆ ವರನ ಕಡೆಯವರು ತಾವು ಪಡೆದಿದ್ದನ್ನೆಲ್ಲಾ ಹಿಂತಿರುಗಿಸಿದ ನಂತರ ವಿವಾದ ಬಗೆಹರಿದಿದೆ.
ಇದನ್ನೂ ಓದಿ: ಮದುವೆಗಳನ್ನು ಬ್ಯಾನ್ ಮಾಡದಿದ್ದರೆ ಗರ್ಲ್ಫ್ರೆಂಡ್ ವಿವಾಹ ಬೇರೆಯವನೊಂದಿಗೆ ಆಗುತ್ತದೆ: ನೀತಿಷ್ ಕುಮಾರ್ಗೆ ಪ್ರಿಯಕರನ ಮೊರೆ!
ಮಹಿಳೆಯನ್ನು ವಂಚಿಸಿದ ಆರೋಪ ಹೊತ್ತಿರುವ ಪಾಕ್ ಕ್ರಿಕೆಟಿಗನಿಗೆ ಮದುವೆ; ಸೋದರ ಸಂಬಂಧಿ ಜತೆ ವಿವಾಹ
Published On - 11:38 am, Mon, 7 June 21