Viral Video: ಕೊವಿಡ್ 19 ಲಸಿಕೆ ಪಡೆಯುವಾಗ ಮಕ್ಕಳಂತೆ ಅತ್ತ ಮಹಿಳೆ; ಕಿವಿ, ಮೂಗು ಚುಚ್ಚುವಾಗ ಏನಾಗಿತ್ತು ಎಂದು ಕೇಳಿದ ನೆಟ್ಟಿಗರು
ವೈದ್ಯಕೀಯ ಸಿಬ್ಬಂದಿಯೊಬ್ಬರು ಕೊರೊನಾ ಲಸಿಕೆ ನೀಡಲೆಂದು ಇಂಜೆಕ್ಷನ್ ಕೊಡುತ್ತಿದ್ದಂತೆ ದೊಡ್ಡದಾಗಿ ಬಾಯಿ, ಸ್ವರ ತೆಗೆದು ಚಿಕ್ಕಮಕ್ಕಳೆಲ್ಲ ಅಳುವಂತೆ ಅತ್ತಿದ್ದಾರೆ.
ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದರೆ ಇನ್ನೂ ಕೆಲವರು ಕೊವಿಡ್ 19 ಲಸಿಕೆ (Covid 19 Vaccine) ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದೇನೋ ಅಳುಕು, ಹಿಂಜರಿಕೆ ತೋರಿಸುತ್ತಿದ್ದಾರೆ. ಸುಮಾರು ಜನರಿಗೆ ಕೊರೊನಾ ಲಸಿಕೆ ಪಡೆಯಬೇಕಾದ ಉದ್ದೇಶವಾಗಲಿ, ಅದರ ಮಹತ್ವವಾಗಲಿ ಗೊತ್ತಿಲ್ಲ. ಇನ್ನು ಕೆಲವು ಲಸಿಕೆ ತೆಗೆದುಕೊಳ್ಳಲು ಬಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ಸಿಕ್ಕಾಪಟೆ ಭಯ ಪಡುತ್ತಿದ್ದಾರೆ. ಚುಚ್ಚುಮದ್ದು ಎಂದರೆ ನಮ್ಮಲ್ಲಿ ಅನೇಕರಿಗೆ ಸಾಮಾನ್ಯವಾಗಿ ಭಯ ಇದ್ದೇ ಇದೆ. ಹಾಗೇ, ವ್ಯಾಕ್ಸಿನ್ ಪಡೆಯುವಾಗಲೂ ಹೆದರಿಕೊಂಡು ಅತ್ತ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಆದರೆ ಈಗೊಬ್ಬಳು ಮಹಿಳೆ ಕೊರೊನಾ ಲಸಿಕೆ ಪಡೆಯುವಾಗ ಅತ್ತ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಂತೂ ಇದು ಓವರ್ ಆ್ಯಕ್ಟಿಂಗ್…ಡ್ರಾಮಾ ಎಂದು ಟೀಕಿಸಿದ್ದಾರೆ. ನಗು ತಡೆಯಲು ಆಗುತ್ತಿಲ್ಲ ಎಂದವರೂ ಇದ್ದಾರೆ.
ಈ ಮಹಿಳೆ ಆರೆಂಜ್ ಬಣ್ಣದ ಸೀರೆಯುಟ್ಟಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಕೇಂದ್ರಕ್ಕೆ ಆಗಮಿಸಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರಿಗೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಕೊರೊನಾ ಲಸಿಕೆ ನೀಡಲೆಂದು ಇಂಜೆಕ್ಷನ್ ಕೊಡುತ್ತಿದ್ದಂತೆ ದೊಡ್ಡದಾಗಿ ಬಾಯಿ, ಸ್ವರ ತೆಗೆದು ಚಿಕ್ಕಮಕ್ಕಳೆಲ್ಲ ಅಳುವಂತೆ ಅತ್ತಿದ್ದಾರೆ. ಅವರು ಅತ್ತಿದ್ದನ್ನು ನೋಡಿ, ವೈದ್ಯಕೀಯ ಸಿಬ್ಬಂದಿ ಜತೆಗೆ ಲಸಿಕೆ ತೆಗೆದುಕೊಳ್ಳಲು ಬಂದ ಉಳಿದವರೂ ಕಂಗಾಲಾಗಿದ್ದಾರೆ.
ಅಷ್ಟೆಲ್ಲ ದೊಡ್ಡದಾಗಿ ಅಳುವಷ್ಟು ನೋವು ಹೇಗಾಗುತ್ತದೆ ಎಂದೇ ನೆಟ್ಟಿಗರು ಪ್ರಶ್ನಿಸಿದ್ದಾರೆ. ಆ ಮಹಿಳೆ ಕಿವಿ ಚುಚ್ಚಿಸಿಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಂಡಿದ್ದಾರೆ. ಅಲ್ಲೆಲ್ಲ ಆಭರಣಗಳು ಇವೆ..ಈ ಲಸಿಕೆ ಕೊಡುವಾಗ ಅಷ್ಟೂ ನೋವಾಗುವುದಿಲ್ಲ. ಆದರೂ ಯಾಕೆ ಹೀಗೆ ಅರಚುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಬಹುತೇಕರಂತೂ ಇದು ಅತಿಯಾದ ನಟನೆ ಎಂದೇ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
View this post on Instagram
Woman Cries Like a Child After Getting Covid 19 Vaccine
Published On - 6:17 pm, Mon, 12 July 21