ಒನ್‌ವೇನಲ್ಲಿ ಕೆಎಸ್‌ಆರ್‌ಪಿ ಬಸ್ ಸಂಚಾರ; ಪ್ರಶ್ನಿಸಿದ ಕಾರು ಚಾಲಕನಿಗೆ ಪೊಲೀಸರಿಂದ ಧಮ್ಕಿ, ವಿಡಿಯೋ ವೈರಲ್!
ಬೆಂಗಳೂರಿನ ಹೊಸೂರು ರಸ್ತೆಯ ನಂಜಪ್ಪ ಸರ್ಕಲ್ ಬಳಿ ಸಂಚಾರ ನಿಯಮ ಉಲ್ಲಂಘಿಸಿದ ಕೆಎಸ್‌ಆರ್‌ಪಿ ಬಸ್ ಸಿಬ್ಬಂದಿ, ಅದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಒನ್‌ವೇ ರಸ್ತೆಯಲ್ಲಿ ಬಸ್ ಚಲಾಯಿಸಿದ್ದನ್ನು ರೇಂಜ್ ರೋವರ್ ಕಾರು ಚಾಲಕ ಪ್ರಶ್ನಿಸಿದ್ದು, ಇದರಿಂದ ಆಕ್ರೋಶಗೊಂಡ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ನವೆಂಬರ್ 03: ಸಂಚಾರ ನಿಯಮ ಪಾಲನೆ ಮಾಡಬೇಕಾದ ಪೊಲೀಸರೇ ನಿಯಮ ಉಲ್ಲಂಘಿಸಿದ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಒನ್‌ವೇ ರಸ್ತೆಯಲ್ಲಿ ಕೆಎಸ್‌ಆರ್‌ಪಿ ಬಸ್ ಚಲಾಯಿಸಿ, ಇದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಘಟನೆ ಹೊಸೂರು ರಸ್ತೆಯ ನಂಜಪ್ಪ ಸರ್ಕಲ್ ಬಳಿ ನಡೆದಿದೆ.
ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಕ್ಕಿತಿಮ್ಮನಹಳ್ಳಿ ಮಾರ್ಗವಾಗಿ ನಂಜಪ್ಪ ಸರ್ಕಲ್ ಕಡೆಗೆ ಬಂದ ಕೆಎಸ್‌ಆರ್‌ಪಿ ಬಸ್ ಒನ್‌ವೇನಲ್ಲಿ ಸಂಚರಿಸಿದೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ವೇಳೆ ರೇಂಜ್ ರೋವರ್ ಕಾರಿನಲ್ಲಿ ಬರುತ್ತಿದ್ದ ಚಾಲಕ ಸಂಚಾರ ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಎಸ್‌ಆರ್‌ಪಿ ಸಿಬ್ಬಂದಿ ಕಾರನ್ನು ತಡೆದು ಸುತ್ತುವರಿದು ಚಾಲಕನಿಗೆ ಧಮ್ಕಿ ಹಾಕಿ ನಿಂದಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಅಶೋಕನಗರ ಸಂಚಾರ ಪೊಲೀಸರಿದ್ದರೂ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಪೊಲೀಸರ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

