1 ವಾರದಲ್ಲಿ ಎಲ್ಲವೂ ಸರಿಯಾಗುತ್ತೆ, ಮತ್ತೆ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆ: ವಿಜಯೇಂದ್ರ

1 ವಾರದಲ್ಲಿ ಎಲ್ಲವೂ ಸರಿಯಾಗುತ್ತೆ, ಮತ್ತೆ ನಾನೇ ರಾಜ್ಯಾಧ್ಯಕ್ಷನಾಗುತ್ತೇನೆ: ವಿಜಯೇಂದ್ರ

Basavaraj Yaraganavi
| Updated By: ವಿವೇಕ ಬಿರಾದಾರ

Updated on:Feb 03, 2025 | 11:10 AM

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಒಂದು ವಾರದೊಳಗೆ ರಾಜ್ಯಾಧ್ಯಕ್ಷರನ್ನು ಆಯ್ಕೆ ಆಗುತ್ತಾರೆ. 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷರು ಯಾರೆಂಬುದಕ್ಕೆ ಉತ್ತರ ಸಿಗಲಿದೆ. ಯತ್ನಾಳ್ ಅವರ ಹೇಳಿಕೆಯಿಂದ ಪಕ್ಷಕ್ಕೆ ಆದ ಹಾನಿ ಸರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸುಧಾರಿಸಲಿದೆ ಎಂಬ ವಿಶ್ವಾಸವಿದೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಶಿವಮೊಗ್ಗ, ಫೆಬ್ರವರಿ 03: ಬಿಜೆಪಿಯಲ್ಲಿ (BJP) ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ವ್ಯವಸ್ಥಿತವಾಗಿ ಸಂಘಟನೆ, ಚುನಾವಣೆ ನಡೆಯುವುದು ಬಿಜೆಪಿಯಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ರಾಜ್ಯ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟ​ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ ರೀತಿ ಕಾರ್ಯಕರ್ತರಿಗೆ ಗೊತ್ತಿದೆ. ನಾನು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂಬ ಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಆಶಯ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಅದೇರೀತಿ ಪೈಪೋಟಿ ಇದೆ. ಎಲ್ಲವನ್ನು ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ.ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕು ಎಲ್ಲವೂ ಆಗಿ ಹೋಗಿದೆ. ಒಂದು ವಾರದಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಉತ್ತರ ಸಿಗುತ್ತದೆ. ಅದಾದನಂತರ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

ಕಳೆದ ವರ್ಷದಿಂದ ನಾನು ಯಾರು ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ. ಬಹಳ ದೊಡ್ಡ ಜವಾಬ್ದಾರಿಯನ್ನು ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೆನೆ. 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷ ಯಾರೆಂಬುದಕ್ಕೆ ಉತ್ತರ ಸಿಗಲಿದೆ. ಬಳಿಕ ಎಲ್ಲ ಸಮಸ್ಯೆಗಳು ಬಗೆ ಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 03, 2025 11:09 AM