BBMP ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಬೆಂಗಳೂರಿನ ಕೋರಮಂಗಲದ ರಾಜೇಂದ್ರನಗರ ಬಳಿಯ ಬಿಬಿಎಂಪಿಯ ಆಟದ ಮೈದಾನದಲ್ಲಿ ಪಾಸ್ ಪೋರ್ಟ್ ಸಂಸ್ಥೆ ಕಾಂಪೌಂಡ್ ನಿರ್ಮಿಸಿರೋದು ಚಿಣ್ಣರ ಆಟಕ್ಕೆ ತೊಂದರೆಯಾಗಿದೆ. ಇದರಿಂದ ಮಕ್ಕಳು ಆಟದ ಮೈದಾನಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು, (ನವೆಂಬರ್ 10): ಕೋರಮಂಗಲದ ರಾಜೇಂದ್ರನಗರ ಬಳಿ ಇರೋ ಬಿಬಿಎಂಪಿಯ ಆಟದ ಮೈದಾನದಲ್ಲಿ ಇದೀಗ ಪಾಸ್ ಪೋರ್ಟ್ ಸಂಸ್ಥೆ ಕಾಂಪೌಂಡ್ ನಿರ್ಮಿಸಿರೋದು ಚಿಣ್ಣರ ಆಟಕ್ಕೆ ಇದ್ದ ಜಾಗವನ್ನ ಕಸಿದುಬಿಟ್ಟಿದೆ. ಪಾಲಿಕೆ ಮಾಡಿದ ಯಡವಟ್ಟಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ,ಅಕ್ಕಪಕ್ಕದ ಮನೆಗಳಲ್ಲಿರೋ ಮಕ್ಕಳಿಗೆ ಆಟ ಆಡೋಕೆ ಸ್ಥಳವಿಲ್ಲದಂತಾಗಿದ್ದು, ಬಿಬಿಎಂಪಿಯ ವಿರುದ್ಧ ಪುಟಾಣಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಮಕ್ಕಳ ಆಟದ ಮೈದಾನ ಕಂಡವರ ಪಾಲಾಗಿದ್ದು, ಇತ್ತ ಆಟ ಆಡೋಕೆ ಜಾಗವಿಲ್ಲದೇ ಸಾವಿರಾರು ಮಕ್ಕಳು ಕಂಗಾಲಾಗಿದ್ದಾರೆ. ಇತ್ತ ಅನಧಿಕೃತವಾಗಿ ಆಟದ ಮೈದಾನದಲ್ಲಿ ತಲೆ ಎತ್ತಿರೋ ಕಾಂಪೌಂಡ್ ಬಗ್ಗೆ ತಲೆಕೆಡಿಸಿಕೊಳ್ಳದ ಪಾಲಿಕೆ, ಈಗಲಾದ್ರೂ ಎಚ್ಚೆತ್ತುಕೊಂಡು ಮಕ್ಕಳ ಆಟದ ಮೈದಾನವನ್ನ ಮರಳಿ ಮಕ್ಕಳಿಗೆ ಸಿಗುವಂತೆ ಮಾಡಬೇಕಿದೆ.