ಕಾಕನಕೋಟೆ ಸಫಾರಿಯಲ್ಲಿ ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ಕಬಿನಿ ಹಿನ್ನೀರು ಪ್ರದೇಶದ ಕಾಕನಕೋಟೆ ಸಫಾರಿಯಲ್ಲಿ ಪ್ರವಾಸಿಗರಿಗೆ ಆನೆ ಹಿಂಡಿನ ಅದ್ಭುತ ದೃಶ್ಯ ಲಭಿಸಿದೆ. ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಬರುವ ಈ ಸ್ಥಳದಲ್ಲಿ ಆನೆಗಳ ದೊಡ್ಡ ಹಿಂಡಿನ ನಡುವೆ ಪುಟಾಣಿ ಆನೆ ಮರಿಗಳು ಮಲಗಿದ್ದ ಅಪರೂಪದ ಕ್ಷಣಗಳು ಎಲ್ಲರ ಗಮನ ಸೆಳೆದಿವೆ. ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ಸೆರೆಹಿಡಿದ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕೃತಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ಮೈಸೂರು, ಜೂ.19: ವಿಶ್ವವಿಖ್ಯಾತ ಕಬಿನಿ ಹಿನ್ನೀರು (Kabini Backwaters) ವನ್ಯಜೀವಿ ಪ್ರೇಮಿಗಳಿಗೆ ಮತ್ತೊಮ್ಮೆ ದೃಶ್ಯ ವೈಭವವನ್ನು ಉಣಬಡಿಸಿದೆ. ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಬರುವ ಕಾಕನಕೋಟೆ ಸಫಾರಿಗೆ (Kakanakote Safari) ತೆರಳಿದ್ದ ಪ್ರವಾಸಿಗರಿಗೆ ಪ್ರಕೃತಿಯ ಅತ್ಯಂತ ಅಪರೂಪದ ಹಾಗೂ ಮನಸೂರೆಗೊಳ್ಳುವ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ. ಕಾಕನಕೋಟೆ ಅರಣ್ಯ ವಲಯದಲ್ಲಿ ಎಂದಿನಂತೆ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಕಬಿನಿ ಹಿನ್ನೀರಿನ ಹಸಿರು ಹುಲ್ಲುಗಾವಲಿನಲ್ಲಿ ಸಾಲು ಸಾಲು ಆನೆಗಳ ದೊಡ್ಡ ಹಿಂಡು ಒಟ್ಟಿಗೆ ಕಾಣಿಸಿಕೊಂಡಿದೆ. ಕಾಡಿನ ದೈತ್ಯ ಜೀವಿಗಳು ಗುಂಪಾಗಿ ಸಾಗುತ್ತಿದ್ದ ದೃಶ್ಯವನ್ನು ಕಂಡು ಪ್ರವಾಸಿಗರು ಅತ್ಯಂತ ರೋಮಾಂಚನಗೊಂಡಿದ್ದಾರೆ. ಈ ಅಪರೂಪದ ಕ್ಷಣಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಆನೆ ಮರಿಗಳ ಮುದ್ದಾದ ಆಟ. ಆನೆಗಳ ಹಿಂಡಿನ ನಡುವೆ, ತಾಯಿ ಆನೆಯ ಆಶ್ರಯದಲ್ಲಿ ಮತ್ತು ರಕ್ಷಣೆಯಲ್ಲಿ ಎರಡು ಪುಟಾಣಿ ಆನೆ ಮರಿಗಳು ಆರಾಮವಾಗಿ ಮಲಗಿದ್ದ ದೃಶ್ಯ ನೆರೆದಿದ್ದವರ ಮನ ಗೆದ್ದಿದೆ. ವನ್ಯಜೀವಿಗಳ ಜಗತ್ತಿನಲ್ಲಿ ತಾಯಿಯ ಮಮತೆಯನ್ನು ಸಾರುವ ಇಂತಹ ದೃಶ್ಯಗಳು ತೀರಾ ವಿರಳವಾಗಿ ಸಿಗುತ್ತವೆ. ಆನೆಗಳ ಈ ಅದ್ಭುತ ಒಡನಾಟ ಮತ್ತು ಅಪರೂಪದ ಕ್ಷಣಗಳನ್ನು ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ಅವರು ತಮ್ಮ ಕ್ಯಾಮೆರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಸದ್ಯ ಈ ಆನೆಗಳ ಹಿಂಡಿನ ಹಾಗೂ ಮರಿಗಳ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಕೃತಿ ಪ್ರೇಮಿಗಳ ಮನ ಸೆಳೆಯುತ್ತಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
