KL Rahul: ಬರೋಬ್ಬರಿ 111 ಎಸೆತಗಳು… ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
India A vs India B: ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್ ಆಡಿದ ಭಾರತ ಬಿ ತಂಡವು ಮುಶೀರ್ ಖಾನ್ (181) ಅವರ ಭರ್ಜರಿ ಶತಕದ ನೆರವಿನಿಂದ 321 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಭಾರತ ಎ ತಂಡವು 231 ರನ್ಗಳಿಗೆ ಆಲೌಟ್ ಆಗಿ 90 ರನ್ಗಳ ಹಿನ್ನಡೆ ಅನುಭವಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ನಿರಾಶದಾಯಕ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಇಂಡಿಯಾ ಎ ತಂಡದ ಪರ ಕಣಕ್ಕಿಳಿದ ರಾಹುಲ್ 111 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 37 ರನ್ಗಳು ಮಾತ್ರ. ಅದರಲ್ಲೂ ತವರು ಮೈದಾನದಲ್ಲಿ ಕನ್ನಡಿಗನ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 4 ಫೋರ್ಗಳು ಎಂದರೆ ಅಚ್ಚರಿಪಡಲೇಬೇಕು.
ಇನ್ನು 111 ಎಸೆತಗಳಲ್ಲಿ 37 ರನ್ ಬಾರಿಸಿ ಕೆಎಲ್ ರಾಹುಲ್ ಔಟಾದ ರೀತಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ವಾಷಿಂಗ್ಟನ್ ಸುಂದರ್ ಎಸೆದ 49ನೇ ಓವರ್ನ ಮೊದಲ ಎಸೆತವನ್ನು ಪ್ಯಾಡಲ್ ಸ್ವೀಪ್ ಮಾಡಲೆತ್ನಿಸಿದ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗಿದ್ದರು. ಇಲ್ಲಿ ಅಚ್ಚರಿಯ ವಿಷಯ ಎಂದರೆ ರಾಹುಲ್ ಸಂಪೂರ್ಣ ವಿಕೆಟ್ ತೋರಿಸಿ ಸ್ವೀಪ್ ಶಾಟ್ಗೆ ಯತ್ನಿಸಿರುವುದು.
ಅನುಭವಿ ಆಟಗಾರನಾಗಿ ಕೆಎಲ್ ರಾಹುಲ್ ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿರುವ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಅಲ್ಲದೆ 111 ಎಸೆತಗಳನ್ನು ಎದುರಿಸಿದರೂ ಇಂಪ್ಯಾಕ್ಟ್ಫುಲ್ ಇನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಅನೇಕರು ಪ್ರಶ್ನೆಗಳೆನ್ನತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಎ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಡಿಯಾ ಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ 19 ವರ್ಷದ ಯುವ ದಾಂಡಿಗ ಮುಶೀರ್ ಖಾನ್ 181 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿದಾಟಿಸಿದ್ದರು. ಈ ಮೂಲಕ ಇಂಡಿಯಾ ಬಿ ತಂಡವು ಪ್ರಥಮ ಇನಿಂಗ್ಸ್ 321 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿರುವ ಇಂಡಿಯಾ ಎ ತಂಡವು 231 ರನ್ಗಳಿಗೆ ಆಲೌಟ್ ಆಗಿದೆ.