AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಜಟಾಪಟಿ: ಮುಜರಾಯಿ ನಿಯಮದಿಂದ ಗೊಂದಲ

ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಜಟಾಪಟಿ: ಮುಜರಾಯಿ ನಿಯಮದಿಂದ ಗೊಂದಲ

ಮಂಜುನಾಥ ಕೆಬಿ
| Edited By: |

Updated on:Sep 07, 2026 | 8:32 PM

Share

ಹಾಸನ ಜಿಲ್ಲೆಯ ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಪೂಜಾ ಸರದಿ ವಿಚಾರದಲ್ಲಿ ತೀವ್ರ ಗೊಂದಲ ಉಂಟಾಗಿದೆ. ಮುಜರಾಯಿ ಇಲಾಖೆಯ ನಿಯಮಗಳಿಂದಾಗಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಿದ್ದ 24 ಕುಟುಂಬಗಳಲ್ಲಿ ಆರು ಕುಟುಂಬಗಳಿಗೆ ಮಾತ್ರ ನೇಮಕಾತಿ ಪತ್ರ ಸಿಕ್ಕಿದ್ದು, ಉಳಿದ ಅರ್ಚಕರಿಗೆ ಅವಕಾಶ ಸಿಗದಿರುವುದು ಜಟಾಪಟಿಗೆ ಕಾರಣವಾಗಿದೆ. ತಹಸೀಲ್ದಾರ್ ಮಧ್ಯಪ್ರವೇಶಿಸಿ ತಾತ್ಕಾಲಿಕವಾಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಹಾಸನ, ಸೆ.7: ಜಿಲ್ಲೆಯ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಸರದಿ ಪೂಜೆ ವಿಚಾರದಲ್ಲಿ ತೀವ್ರ ಗೊಂದಲ ಉಂಟಾಗಿ, ಜಟಾಪಟಿಗೆ ಕಾರಣವಾಗಿದೆ. ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದಲ್ಲಿರುವ ಈ ಐತಿಹಾಸಿಕ ದೇವಾಲಯಕ್ಕೆ ಜಿಲ್ಲೆಯಲ್ಲದೆ ಹೊರ ಜಿಲ್ಲೆಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶತಮಾನಗಳಿಂದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ 24 ಯಾದವ ವಂಶಸ್ಥರ ಕುಟುಂಬಗಳ ನಡುವೆ ಮುಜರಾಯಿ ಇಲಾಖೆ ನಿಯಮಗಳಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೋಟ್ಯಾಂತರ ರೂಪಾಯಿ ಆದಾಯವಿರುವ ಈ ದೇವಾಲಯದಲ್ಲಿ, ಮುಜರಾಯಿ ಇಲಾಖೆ ನೇಮಿಸಿದ ಅರ್ಚಕರು ಮಾತ್ರ ಪೂಜೆ ಸಲ್ಲಿಸಬೇಕೆಂಬ ನಿಯಮವಿದೆ. ಈ ನಿಯಮದಡಿ 24 ಕುಟುಂಬಗಳ ಪೈಕಿ ಕೇವಲ ಆರು ಕುಟುಂಬಗಳಿಗೆ ಮಾತ್ರ ನೇಮಕಾತಿ ಆದೇಶ ದೊರೆತಿದ್ದು, ಉಳಿದವರಿಗೆ ಇನ್ನೂ ಸಿಕ್ಕಿಲ್ಲ. ಇದರಿಂದ, ಆದೇಶ ಪಡೆದವರು ಮಾತ್ರ ಪೂಜೆ ಮಾಡಬೇಕೆಂದು ಒಂದು ಗುಂಪು, ಎಲ್ಲರಿಗೂ ಅವಕಾಶ ನೀಡಬೇಕೆಂದು ಮತ್ತೊಂದು ಗುಂಪು ವಾದಿಸಿ, ಘರ್ಷಣೆಗಿಳಿದವು. ಘಟನೆಯಿಂದ ಸುಮಾರು ಐದರಿಂದ ಆರು ಗಂಟೆಗಳ ಕಾಲ ಭಕ್ತರಿಗೆ ದರ್ಶನವಿಲ್ಲದೆ ಕಾಯುವಂತಾಯಿತು. ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ, ಸದ್ಯಕ್ಕೆ ಹಳೆಯ ಸರದಿ ಪೂಜೆ ಪದ್ಧತಿಯನ್ನೇ ಮುಂದುವರೆಸುವಂತೆ ಸೂಚಿಸಿ, ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದ್ದಾರೆ. ಜಿಲ್ಲಾಡಳಿತದೊಂದಿಗೆ ಮತ್ತಷ್ಟು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ನೀಡಲಾಗಿದ್ದು, ಸದ್ಯಕ್ಕೆ ದೇವಸ್ಥಾನದಲ್ಲಿ ಪೂಜೆ ಪುನರಾರಂಭಗೊಂಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 07, 2026 08:30 PM

Follow Us