ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ವಿವಾದ: ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಉತ್ತರಾಖಂಡಕ್ಕೆ ವರ್ಗಾವಣೆ
ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ ಉತ್ತರಾಖಂಡದ ಹಲ್ದವಾನಿಯ ರಾಮಲೀಲಾ ಮೈದಾನ ಶುದ್ಧೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ವಿಧಾನಸೌಧದಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಹಲ್ದವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಖರ್ಗೆ ಅವರು ದಲಿತರೆಂಬ ಕಾರಣಕ್ಕೆ ವೇದಿಕೆ ಶುದ್ಧೀಕರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ವಿವಾದದ ಕುರಿತು ದೇಶಾದ್ಯಂತ ಹಲವು ಎಫ್ಐಆರ್ ಗಳು ದಾಖಲಾಗಿವೆ.
ಬೆಂಗಳೂರು, ಸೆಪ್ಟೆಂಬರ್ 05: ಉತ್ತರಾಖಂಡದ ಹಲ್ದವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ ರಾಮಲೀಲಾ ಮೈದಾನವನ್ನು ಶುದ್ಧೀಕರಣ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇತ್ತ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಇದೀಗ ಉತ್ತರಾಖಂಡದ ಹಲ್ದವಾನಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಆಗಸ್ಟ್ 8 ರಂದು ಖರ್ಗೆ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ಬಳಿಕ ಎರಡು ದಿನಗಳ ನಂತರ ಕೆಲ ಹಿಂದೂ ಸಂಘಟನೆಗಳು ಹೋಮ-ಹವನ ಮಾಡುವ ಮೂಲಕ ಸ್ಥಳವನ್ನು ಶುದ್ಧೀಕರಣ ಮಾಡಿದ್ದರು. ಖರ್ಗೆ ಅವರು ದಲಿತ ಸಮುದಾಯದವರೆಂಬ ಕಾರಣಕ್ಕೆ ಜಾತಿ ತಾರತಮ್ಯ ಎಸಗಿ ಈ ರೀತಿ ಅವಮಾನಿಸಲಾಗಿದೆ ಎಂದು ಆರೋಪಿಸಿ ಎಐಸಿಸಿ ಸದಸ್ಯ ರಾಮಪ್ಪ ದೂರು ನೀಡಿದ್ದರು. ಅವರ ದೂರಿನನ್ವಯ ಬೆಂಗಳೂರು ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಬಿಎನ್‌ಎಸ್ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆ ನಡೆದದ್ದು ಉತ್ತರಾಖಂಡದ ವ್ಯಾಪ್ತಿಯಲ್ಲಾದ್ದರಿಂದ ವ್ಯಾಪ್ತಿಯ ಆಧಾರದ ಮೇಲೆ ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ದಾಖಲಾಗಿರುವ ಸುಮಾರು 8 ಎಫ್‌ಐಆರ್‌ಗಳು ಹಲ್ದ್ವಾನಿ ಠಾಣೆಗೆ ವರ್ಗಾಯಿಸುವ ಸಾಧ್ಯತೆಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

