ಪಂಚಮಸಾಲಿ ಗುರುಪೀಠದಲ್ಲಿ 10 ಕೋಟಿ ರೂ. ಅನುದಾನ ದುರುಪಯೋಗ ಆರೋಪ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತನಿಖೆಗೆ ಪತ್ರ ಬರೆದ ರಾಜ್ಯಪಾಲರು
ಪಂಚಮಸಾಲಿ ಗುರುಪೀಠದಲ್ಲಿ ₹10 ಕೋಟಿ ಅನುದಾನ ದುರುಪಯೋಗ ಆರೋಪ ಕೇಳಿಬಂದಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ವಸತಿ ನಿಲಯ, ಸಮುದಾಯ ಭವನ ನಿರ್ಮಾಣಕ್ಕೆ ನೀಡಲಾಗಿದ್ದ ₹8 ಕೋಟಿ ಸೇರಿ ಒಟ್ಟು ₹10 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಕುರಿತು ರಾಜ್ಯಪಾಲರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಮಠದ ಭಕ್ತರು ಮತ್ತು ಟ್ರಸ್ಟ್ ನಡುವೆ ಸಂಘರ್ಷ ತಾರಕಕ್ಕೇರಿದೆ.
ದಾವಣಗೆರೆ, ಸೆ.29: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಪಂಚಮಸಾಲಿ ಗುರುಪೀಠವು ಇತ್ತೀಚೆಗೆ ನಿರಂತರ ವಿವಾದಗಳಿಂದ ಸುದ್ದಿಯಲ್ಲಿದೆ. ಮಠದ ಸ್ವಾಮೀಜಿ ಪರ ಭಕ್ತರು ಮತ್ತು ಟ್ರಸ್ಟ್ ನಡುವೆ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಸಂಘರ್ಷವು ಈಗ ಕಾನೂನಾತ್ಮಕ ಹೋರಾಟದ ಸ್ವರೂಪ ಪಡೆದುಕೊಂಡಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ವಿದ್ಯಾರ್ಥಿ ವಸತಿ ನಿಲಯ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಮಠಕ್ಕೆ ನೀಡಲಾಗಿದ್ದ ಸುಮಾರು 8 ಕೋಟಿ ರೂ. ಸೇರಿದಂತೆ ಒಟ್ಟು 10 ಕೋಟಿ ರೂ. ಹಣದ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಹಣ ಸಂಪೂರ್ಣವಾಗಿ ಬಳಕೆ ಆಗಿಲ್ಲ, ಬದಲಿಗೆ ದುರುಪಯೋಗವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ರಾಜ್ಯಪಾಲರು ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಮಠದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಭಕ್ತರು ಲೆಕ್ಕ ಕೊಡಿ ಚಳುವಳಿ ಆರಂಭಿಸಿದ್ದು, ಮಠದ ಆಡಳಿತದಲ್ಲಿ ಪಾರದರ್ಶಕತೆಗೆ ಆಗ್ರಹಿಸುತ್ತಿದ್ದಾರೆ. ಜಿಲ್ಲಾಡಳಿತವು ಮಹಾಂತ ಸ್ವಾಮಿ ಅವರ ಜಯಂತಿ ವೇಳೆ ಸಭೆ-ಸಮಾರಂಭಗಳಿಗೆ ನಿಷೇಧಾಜ್ಞೆ ವಿಧಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

